Saturday, 23rd November 2024

IND vs AUS: 20 ವರ್ಷದ ಬಳಿಕ ಆಸೀಸ್‌ನಲ್ಲಿ ದಾಖಲೆ ಬರೆದ ಜೈಸ್ವಾಲ್-ರಾಹುಲ್ ಜೋಡಿ

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಪರ್ತ್‌ ಟೆಸ್ಟ್‌ನ(IND vs AUS) ಮೊದಲ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಜತೆಯಾಟ ನಡೆಸುವಲ್ಲಿ ವಿಫಲವಾಗಿದ್ದ ಟೀಮ್‌ ಇಂಡಿಯಾದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತು ಕೆ.ಎಲ್ ರಾಹುಲ್(KL Rahul) ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಜತೆಯಾಟವೊಂದನ್ನು ನಡೆಸಿ ದಾಖಲೆಯೊಂದನ್ನು ಬರೆದಿದೆ.

2004 ರ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಜತೆಯಾಟ ನಡೆಸಿದ ಭಾರತದ ಮೊದಲ ಆರಂಭಿಕ ಜೋಡಿಯಾದರು. ಜತೆಗೆ ಈ ಸಾಧನೆ ಮಾಡಿದ ಭಾರತದ ಆರನೇ ಜೋಡಿ ಎನಿಸಿಕೊಂಡರು. 2004ರ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ 123 ರನ್ ಜತೆಯಾಟ ನಡೆಸಿದ್ದರು. ಸದ್ಯ ಉತ್ತಮವಾಗಿ ಬ್ಯಾಟ್‌ ಬೀಸುತ್ತಿರುವ ಜೈಸ್ವಾಲ್‌ ಮತ್ತು ರಾಹುಲ್‌ ಅಜೇಯ ಅರ್ಧಶತಕ ದಾಖಲಿಸಿ ಶತಕ ಬಾರಿಸುವತ್ತ ದಾಪುಗಾಲಿಟ್ಟಿದ್ದಾರೆ. ಜೈಸ್ವಾಲ್‌ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸಂಟಕ್ಕೆ ಸಿಲುಕಿದ್ದರು.

ಆಸ್ಟ್ರೇಲಿಯಾ ನೆಲದಲ್ಲಿ ಆರಂಭಿಕ ವಿಕೆಟ್‌ಗೆ ನೂರು ರನ್‌ಗಳ ಜತೆಯಾಟ ನಡೆಸಿದ ಮೊದಲ ಜೋಡಿ ಎಂಬ ದಾಖಲೆ ಸುನೀಲ್‌ ಗವಾಸ್ಕರ್‌ ಮತ್ತು ಕೆ. ಶ್ರೀಕಾಂತ್‌ ಹೆಸರಿನಲ್ಲಿದೆ. ಈ ಜೋಡಿ 1986ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 191 ರನ್‌ ಬಾರಿಸಿದ್ದರು.

67 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಶನಿವಾರ ಹರ್ಷಿತ್‌ ರಾಣಾ ಮತ್ತು ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿ 104 ರನ್‌ಗಳಿಗೆ ಆಲೌಟ್ ಆಯಿತು. ಇದು 2000ರದ ಬಳಿಕ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಗಳಿಸಿದ ಮೂರನೇ ಅತಿ ಕಡಿಮೆ ಮೊತ್ತವಾಗಿದೆ.

ಇದನ್ನೂ ಓದಿ IND vs AUS: 46 ರನ್‌ ಮುನ್ನಡೆ ಸಾಧಿಸಿದ ಭಾರತ; ಆಸೀಸ್‌ 104ಕ್ಕೆ ಆಲೌಟ್‌ 

5 ವಿಕೆಟ್‌ ಕೀಳುವ ಮೂಲಕ ಬುಮ್ರಾ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ 4 ಬೌಲರ್‌ ಎನಿಸಿಕೊಂಡರು. ಈ ವೇಳೆ ಅವರು ಮಾಜಿ ಆಟಗಾರ ಬಿಷನ್‌ ಸಿಂಗ್‌ ಬೇಡಿ(35) ಅವರನ್ನು ಹಿಂದಿಕ್ಕಿದ್ದರು. ಬುಮ್ರಾ ಈಗ 36 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ದಾಖಲೆ ಕಪಿಲ್‌ ದೇವ್‌ ಹೆಸರಿನಲ್ಲಿದೆ. ಕಪಿಲ್‌ 51 ವಿಕೆಟ್‌ ಕಿತ್ತಿದ್ದಾರೆ. ಚೊಚ್ಚಲ ಪಂದ್ಯವನ್ನಾಡುತ್ತಿರುವ ದಿಲ್ಲಿಯ ವೇಗಿ ಹರ್ಷಿತ್‌ ರಾಣಾ 3 ವಿಕೆಟ್‌ ಕಿತ್ತು ಸ್ಮರಣೀಯ ಪದಾರ್ಪಣೆ ಮಾಡಿದರು. ದ್ವಿತೀಯ ದಿನ ಅವರು 2 ವಿಕೆಟ್‌ ಕಿತ್ತರು. ಸಿರಾಜ್‌ 2 ವಿಕೆಟ್‌ ಕಿತ್ತರು.