Monday, 14th October 2024

‌IND vs BAN: ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ನೆಟ್ಟಿಗರು ಕ್ಲೀನ್‌ ಬೌಲ್ಡ್‌; ವಿಡಿಯೊ ವೈರಲ್

IND vs BAN

ಚೆನ್ನೈ: ಭಾರತ- ಬಾಂಗ್ಲಾ(IND vs BAN) ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ವಿಶೇಷ ಆಕರ್ಷಣೆಯೊಂದಿಗೆ ಸುದ್ದಿಯಾಯಿತು. ದಿನಗಟ್ಟಲೇ ಕುಳಿತು ಟೆಸ್ಟ್‌ ಪಂದ್ಯವನ್ನು ನೋಡಲು ಹಿಂದೇಟು ಹಾಕುವ ಯುವ ಅಭಿಮಾನಿಗಳ ಮಧ್ಯೆ ಅಜ್ಜಿಯೊಬ್ಬರು ಜೋಶ್‌ ತೋರಿದ ವಿಡಿಯೊ ನೆಟ್ಟಿಗರ ಗಮನಸೆಳೆದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಭಾರತ ತಂಡದ ಆಟಗಾರರು ಬೌಂಡರಿ, ಸಿಕ್ಸರ್‌ ಬಾರಿಸುತ್ತಿದ್ದಾಗ ಆಗಾಗ ಎದ್ದು ನಿಂತು, ಗಾಳಿಯಲ್ಲಿ ಕೈಬೀಸುತ್ತ, ಅತಿಯಾದ ಸಂಭ್ರಮದೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಿದ್ದ ದೃಶ್ಯ ನಿಜಕ್ಕೂ ಅಪರೂಪದ್ದಾಗಿತ್ತು. ಅದರಲ್ಲೂ ಆರ್‌.ಅಶ್ವಿನ್‌(R Ashwin’s Century) ಅವರು ಶತಕ ಬಾರಿಸಿದಾಗ ಕೈಯಲ್ಲಿ ಟೀ ಕಪ್‌ ಇದ್ದರೂ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ಬಿಸಿಸಿಐ ಮತ್ತು ನೆರೆದಿದ್ದ ಪ್ರೇಕ್ಷಕರು ಕ್ಲೀನ್ ಬೌಲ್ಡ್‌‌ ಆಗಿದ್ದಾರೆ.

ಶತಕ ಗಳಿಸಿದ್ದ ಅಶ್ವಿನ್‌ ದ್ವಿತೀಯ ದಿನದಾಟದಲ್ಲಿ 11 ರನ್‌ ಗಳಿಸಿ ಒಟ್ಟು 113 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. 86 ರನ್‌ ಗಳಿಸಿದ್ದ ಜಡೇಜಾ ಇದೇ ಮೊತ್ತಕ್ಕೆ ವಿಕೆಟ್‌ ಕೈಚೆಲ್ಲಿದರು. ಆಕಾಶ್‌ ದೀಪ್‌ 17 ರನ್‌ ಬಾರಿಸಿದರೆ, ಜಸ್‌ಪ್ರೀತ್‌ ಬುಮ್ರಾ 7 ರನ್‌ ಗಳಿಸಿದರು. ಘಾತಕ ವೇಗಿ ಹಸನ್‌ ಮಹಮೂದ್‌ 5 ವಿಕೆಟ್‌ ಕಿತ್ತು ಮಿಂಚಿದರು. ಇದೇ ವೇಳೆ ಭಾರತ ವಿರುದ್ಧ ಟೆಸ್ಟ್‌ನಲ್ಲಿ 5 ವಿಕೆಟ್‌ ಕಿತ್ತ ಬಾಂಗ್ಲಾದ ಮೊದಲ ಬೌಲರ್‌ ಎನಿಸಿಕೊಂಡರು. ಟಸ್ಕಿನ್‌ ಅಹ್ಮದ್‌ 3 ವಿಕೆಟ್‌ ಕಿತ್ತರು. ಭಾರತ 376 ರನ್‌ ಗಳಿಸಿ ಆಲೌಟ್‌ ಆಗಿದೆ. ಮೊದಲ ಇನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ 26 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ. ಜಸ್‌ಪ್ರೀತ್‌ ಬುಮ್ರಾ ಮೊದಲ ಓವರ್‌ನಲ್ಲಿಯೇ ವಿಕೆಟ್‌ ಕಿತ್ತು ಬಾಂಗ್ಲಾಗೆ ಶಾಕ್‌ ಕೊಟ್ಟರೆ, ಯುವ ವೇಗಿ ಆಕಾಶ್‌ ದೀಪ್‌ ಸತತ 2 ವಿಕೆಟ್‌ ಕಿತ್ತು ಅವಳಿ ಆಘಾತವಿಕ್ಕಿದರು.

ಇದನ್ನೂ ಓದಿ IND vs BAN: 376 ರನ್‌ಗೆ ಭಾರತ ಆಲೌಟ್‌

ಯಶಸ್ವಿ ಜೈಸ್ವಾಲ್(Yashasvi Jaiswal) ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ಮಾಡಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಸ್ವದೇಶದಲ್ಲಿ ಆಡಿರುವ ತನ್ನ ಮೊದಲ 10 ಇನಿಂಗ್ಸ್‌ಗಳಿಂದ 750ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಜೈಸ್ವಾಲ್‌ಗೂ ಮುನ್ನ ಈ ವಿಶ್ವ ದಾಖಲೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಜಾರ್ಜ್ ಹೆಡ್ಲಿ ಹೆಸರಲ್ಲಿತ್ತು. ಹೆಡ್ಲಿ 1935ರಲ್ಲಿ 747 ರನ್ ಗಳಿಸಿದ್ದರು. ಇದೀಗ 89 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿದೆ. ಜೈಸ್ವಾಲ್‌ ಬಾಂಗ್ಲಾ ವಿರುದ್ಧ 118 ಎಸೆತ ಎದುರಿಸಿ 56 ರನ್‌ ಬಾರಿಸಿ ನಹಿದ್ ರಾಣಾಗೆ ವಿಕೆಟ್‌ ಒಪ್ಪಿಸಿದರು.