Thursday, 3rd October 2024

IND vs BAN: ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆ

IND vs BAN

ಕಾನ್ಪುರ: ಅತ್ಯಂತ ಕುತೂಹಲ ಮತ್ತು ರೋಚಕತೆ ಸೃಷ್ಟಿಸಿದ್ದ ಭಾರತ ಮತ್ತು ಬಾಂಗ್ಲಾದೇಶ(IND vs BAN) ನಡುವಣ ಕಾನ್ಪುರ ಟೆಸ್ಟ್‌ನಲ್ಲಿ ಕೊನೆಗೂ ಭಾರತದ ಕೈ ಮೇಲಾಗಿದೆ. ಪಂದ್ಯವನ್ನು ರೋಹಿತ್‌ ಪಡೆ 7 ವಿಕೆಟ್‌ ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿದ ಸಾಧನೆಗೈದಿದೆ. ಈ ಗೆಲುವಿನಿಂದ ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ತನ್ನ ಸ್ಥಾನವನ್ನು ಮತ್ತಷ್ಟು ಬಲ ಪಡಿಸಿದೆ.

ಕಳೆದ ಶುಕ್ರವಾರ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದ ಈ ಪಂದ್ಯದಕ್ಕೆ ಆರಂಭದಲ್ಲೇ ಮಳೆ ಅಡಚಣೆಯಾಗಿತ್ತು. ಮೊದಲ ದಿನದಾಟ ಮಳೆ ಮತ್ತು ಮಂದ ಬೆಳಕಿನಿಂದ ಕೇವಲ 35 ಓವರ್‌ಗಳ ಆಟ ಮಾತ್ರ ಸಾಗಿತ್ತು. ದ್ವಿತೀಯ ದಿನ ಸಂಪೂರ್ಣವಾಗಿ ಮಳೆ ಮೂರನೇ ದಿನ ಒದ್ದೆ ಮೈದಾನದಿಂದಾಗಿ ಒಂದೂ ಎಸೆತ ಕಾಣದೆ ದಿನಾಟ ರದ್ದುಗೊಂಡಿತ್ತು. ನಾಲ್ಕನೇ ದಿನವಾದ ಸೋಮವಾರ ಮೊದಲ ದಿನದ 3 ವಿಕೆಟ್‌ಗೆ 107 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ಮಾಮಿನುಲ್ ಹಕ್ (107 ರನ್, 194 ಎಸೆತ, 17 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ 74.2 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ಗೆಲುವು ಸಾಧಿಸುವ ನಿಟ್ಟಿನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ಭಾರತ ಹಲವು ದಾಖಲೆಯೊಂದಿಗೆ ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿದಿನದ ಆಟ ಮುಕ್ತಾಯಕ್ಕೆ ಇನ್ನೂ ಕೆಲ ಓವರ್‌ಗಳು ಬಾಕಿಯಿರುವಂತೆಯೇ 34.4 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ಗಳಿಸಿ 52ರನ್‌ಗಳ ಮುನ್ನಡೆಯೊಂದಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಇದನ್ನೂ ಓದಿ IND vs BAN: ಕೊಹ್ಲಿ ಬ್ಯಾಟ್‌ನಲ್ಲಿ ಸತತ ಸಿಕ್ಸರ್‌ ಬಾರಿಸಿದ ವೇಗಿ ಆಕಾಶ್‌ ದೀಪ್‌; ವಿಡಿಯೊ ವೈರಲ್‌

52 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 26 ರನ್‌ ಗಳಿಸಿತ್ತು. ಅಂತಿಮ ದಿನವಾದ ಮಂಗಳವಾರ ಬ್ಯಾಟಿಂಗ್‌ ಮುಂದುವರಿಸಿದ ಬಾಂಗ್ಲಾ ನಿಂತು ಆಡುವ ಯೋಜನೆ ನಡೆಸಿದರೂ ಭಾರತೀಯ ಬೌಲರ್‌ಗಳು ಇದಕ್ಕೆ ಅನುವು ಮಾಡಿಕೊಡಲಿಲ್ಲ. ಜಡೇಜಾ, ಅಶ್ವಿನ್‌ ಮತ್ತು ಬುಮ್ರಾ ಜಿದ್ದಿಗೆ ಬಿದ್ದವರಂತೆ ವಿಕೆಟ್‌ ಬೇಟೆಯಾಡಿ ಬಾಂಗ್ಲಾವನ್ನು ಕಾಡಿದರು. ಮೂವರು ಬೌಲರ್‌ಗಳು ತಲಾ ಮೂರು ವಿಕೆಟ್‌ ಕೆಡವಿ ಮಿಂಚಿದರು.

ನಾಲ್ಕನೇ ದಿನದಾಟದಲ್ಲಿ 7 ರನ್‌ ಗಳಿಸಿದ್ದ ಆರಂಭಿಕ ಆಟಗಾರ ಶಾದ್ಮನ್‌ ಇಸ್ಲಾಂ ಅಂತಿಮ ದಿನ 43‬ ರನ್‌ ಬಾರಿಸುವ ಮೂಲಕ ಅರ್ಥಶತಕ ಪೂರ್ತಿಗೊಳಿಸಿದರು. 101 ಎಸೆತ ಎದುರಿಸಿ ನಿಂತ ಶಾದ್ಮನ್‌ ಭರ್ತಿ 50 ರನ್‌ ಬಾರಿಸಿ ಆಕಾಶ್‌ ದೀಪ್‌ಗೆ ವಿಕೆಟ್‌ ಒಪ್ಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಮಾಮಿನುಲ್ ಹಕ್ ಕೇವಲ 2 ರನ್‌ಗೆ ವಿಕೆಟ್‌ ಕೈಚೆಲ್ಲಿದರು. ನಾಯಕ ನಜ್ಮುಲ್ ಹೊಸೈನ್ 19 ರನ್‌, ಶಕೀಬ್‌ ಅಲ್‌ ಹಸನ್‌ ಶೂನ್ಯಕ್ಕೆ ನಿರ್ಗಮಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತ ಅನುಭವಿ ಮುಶ್ಫಿಕರ್‌ ರಹೀಂ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಅಂತಿಮವಾಗಿ 37 ರನ್‌ ಗಳಿಸಿ ಜಸ್‌ಪ್ರೀತ್‌ ಬುಮ್ರಾ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆದರು. ಇವರ ವಿಕೆಟ್‌ ಪತನಗೊಳ್ಳುತ್ತಿದಂತೆ ಬಾಂಗ್ಲಾ ಕೂಡ ಆಲೌಟ್‌ ಆಯಿತು.

47 ಓವರ್‌ ಆಡಿದ ಬಾಂಗ್ಲಾ 146 ರನ್‌ ಬಾರಿಸಿ 94 ರನ್‌ ಮುನ್ನಡೆ ಸಾಧಿಸಿತು. ಗೆಲುವಿಗೆ 95ರನ್‌ ಗುರಿ ಪಡೆದ ಭಾರತ 18 ರನ್‌ ಗಳಿಸುವಷ್ಟರಲ್ಲೇ ನಾಯಕ ರೋಹಿತ್‌(8) ವಿಕೆಟ್‌ ಕಳೆದುಕೊಂಡ ಆರಂಭಿಕ ಆಘಾತ ಕಂಡಿತು. ಬಳಿಕ ಬಂದ ಶುಭಮನ್‌ ಗಿಲ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಗಿಲ್‌ ಗಳಿಕೆ 6. ಆರಂಭಿಕ ಆಘಾತ ಕಂಡ ಭಾರತಕ್ಕೆ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿ ಆಸರೆಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಕ್ರಮಣಕಾರಿ ಆಟವಾಡಿದ ಜೈಸ್ವಾಲ್‌ ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿಯೂ ಅರ್ಧಶಕ ಬಾರಿಸಿದ್ದರು. ಗೆಲುವಿಗೆ 3 ರನ್‌ ಬೇಕಿದ್ದಾಗ ಜೈಸ್ವಾಲ್‌ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. 45 ಎಸೆತಗಳಿಂದ 51 ರನ್‌ ಚಚ್ಚಿದರು. ಕೊಹ್ಲಿ ಮತ್ತು ಜೈಸ್ವಾಲ್‌ ಮೂರನೇ ವಿಕೆಟ್‌ಗೆ ಅಜೇಯ ರನ್‌ ಜತೆಯಾಟ ನಡೆಸಿದರು. ಅಂತಿಮವಾಗಿ ಭಾರತ 3 ವಿಕೆಟ್‌ಗೆ 98 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಕೊಹ್ಲಿ ಅಜೇಯ 29 ರನ್‌ ಬಾರಿಸಿದರು. ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಮೆಹಿದಿ ಹಸನ್ ಮಿರಾಜ್ 2 ವಿಕೆಟ್‌ ಕಿತ್ತರು.