Wednesday, 11th December 2024

IND vs BAN: 3ನೇ ದಿನವೂ ಮಳೆಯದ್ದೇ ಆಟ; ಒಂದೂ ಎಸೆತ ಕಾಣದೆ ದಿನದಾಟ ರದ್ದು

IND vs BAN

ಕಾನ್ಪುರ: ಭಾರತ(IND vs BAN) ಮತ್ತು ಬಾಂಗ್ಲಾದೇಶ(India vs Bangladesh) ನಡುವಣ ದ್ವಿತೀಯ ಟೆಸ್ಟ್‌ ಪಂದ್ಯದ ಮೂರನೇ ದಿನವೂ ಒಂದೂ ಎಸೆತವಿಲ್ಲದೆ ದಿನದಾಟವನ್ನು ರದ್ದುಗೊಳಿಸಲಾಯಿತು. ಭಾನುವಾರ ಮಳೆ ಇರದಿದ್ದರೂ ಕೂಡ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿತ್ತು. ಸೂಪರ್ ಸಾಪರ್‌ಗಳ ನೆರವಿನಿಂದ ಮೈದಾನದಲ್ಲಿನ ನೀರು ಹೊರತೆಗೆಯಲು ಗ್ರೌಂಡ್ಸ್‌ಮನ್‌ಗಳು ಹರಸಾಹಸಪಟ್ಟರೂ ಮೈದಾನ ಕೆಸರು ಒಣಗದ ಕಾರಣ 2.15ಕ್ಕೆ ಅಧಿಕೃತವಾಗಿ ಅಂಪೈರ್‌ಗಳು ದಿನದ ಆಟವನ್ನು ರದ್ದುಗೊಳಿಸಿದರು. ನಾಲ್ಕನೇ ದಿನವಾದ ಸೋಮವಾರ ಮತ್ತು ಅಂತಿಮ ದಿನ ಮಂಗಳವಾರ ವರುಣ ಬಿಡುವು ನೀಡಲಿದೆ ಎನ್ನಲಾಗಿದೆ. ಕೊನೆಯ ಎರಡು ದಿನ ಆಟ ನಡೆದರೂ, ಪಂದ್ಯ ಬಹುತೇಕ ಡ್ರಾದತ್ತ ಸಾಗಲಿದೆ.

ಮೊದಲ ದಿನದಾಟದಲ್ಲಿ 35 ಓವರ್‌ಗಳ ಆಟ ಮಾತ್ರ ನಡೆದಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ್ದ ಬಾಂಗ್ಲಾದೇಶ 3 ವಿಕೆಟ್‌ಗೆ 107 ರನ್‌ಗಳಿಸಿದೆ. ಮೂರನೇ ದಿನವೂ ಪರಿಸ್ಥಿತಿ ಸುಧಾರಣೆ ಕಾಣದೆ ದಿನದ ಆಟ ಅಸಾಧ್ಯ ಎಂಬುದನ್ನು ಅರಿತ ಎರಡು ತಂಡಗಳ ಆಟಗಾರರು ಮಧ್ಯಾಹ್ನದ ವೇಳೆಗೆ ಹೋಟೆಲ್‌ಗೆ ಹಿಂತಿರುಗಿದರು. ಪಂದ್ಯ ನೋಡಲು ಬಂದಿದ್ದ ಪ್ರೇಕ್ಷಕರು ಕೂಡ ಆಟಗಾರರಂತೆ ನಿರಾಸೆಯೊಂದಿಗೆ ಮನೆ ಕಡೆ ಹೆಜ್ಜೆಹಾಕಿದರು.

ಇದನ್ನೂ ಓದಿ Virat Kohli: 12 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡುವ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ

ಪಂದ್ಯ ಡ್ರಾ ಸಾಧಿಸಿದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್‌ಗೇರುವ ಹಂಬಲದಲ್ಲಿರುವ ಭಾರತಕ್ಕೆ ತುಸು ಹಿನ್ನಡೆಯಾಗುವ ನಿರೀಕ್ಷೆಯಿದೆ. 2023-25ರ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 71.67 ಅಂಕ ಕಲೆಹಾಕಿರುವ ಭಾರತ ಸದ್ಯ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ಎದುರು ಭಾರತ 2-0ಯಿಂದ ಗೆದ್ದರೆ, ಉಳಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಬಹುದು. ಒಂದು ವೇಳೆ ಮಳೆಯಿಂದ 2ನೇ ಟೆಸ್ಟ್ ಡ್ರಾಗೊಂಡರೆ ಮುಂದಿನ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸುವ ಒತ್ತಡಕ್ಕೆ ರೋಹಿತ್ ಶರ್ಮ ಸಿಲುಕಲಿದೆ. ಜತೆಗೆ ಇತರ ತಂಡಗಳ ಫಲಿತಾಂಶವೂ ವರದಾನವಾಗಬೇಕಿದೆ.