ಕಾನ್ಪುರ: ಚೆಪಾಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ, ಕ್ಲೀನ್ ಸ್ವೀಪ್ ಯೋಜನೆಯೊಂದಿಗೆ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಅತ್ತ ಸರಣಿಯನ್ನು ಡ್ರಾ ಮಾಡುವ ನಿಟ್ಟಿನಲ್ಲಿ ಎದುರಾಳಿ ಬಾಂಗ್ಲಾದೇಶ(IND vs BAN) ಈ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಪಣ ತೊಟ್ಟಿದೆ. ಹೀಗಾಗಿ ಕಾನ್ಪುರದ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಎಲ್ಲರ ಕುತೂಹಲ. ಶುಕ್ರವಾರ(ಸೆ.27) ಪಂದ್ಯ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ.
ಗ್ರೀನ್ ಪಾರ್ಕ್ ಸ್ಟೇಡಿಯಂನ ಪಿಚ್ ಸ್ಪಿನ್ ಟ್ರ್ಯಾಕ್ ಆಗಿದ್ದರೂ ಕೂಡ ಇಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿ ಯಾವುದೇ ಟೆಸ್ಟ್ ಪಂದ್ಯ ನಡೆದಿಲ್ಲ. 2021ರಲ್ಲಿ ಕೊನೆಯ ಬಾರಿಗೆ ಇಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಪಂದ್ಯ ನಡೆದಿತ್ತು. ಇದೀಗ ಮೂರು ವರ್ಷಗಳ ಬಳಿಕ ಪಂದ್ಯ ನಡೆಯುತ್ತಿರುವ ಕಾರಣ ಪಿಚ್ ಹೇಗೆ ವರ್ತಿಸಲಿದೆ ಎನ್ನುವ ಕುತೂಹಲ ಸಹಜ. ಭಾರತ ಮತ್ತು ಬಾಂಗ್ಲಾ ಈ ಮೈದಾನದಲ್ಲಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ ಕೂಡ ಇದಾಗಿದೆ.
ಕಾನ್ಪುರದಲ್ಲಿ ಭಾರತ ಬಲಿಷ್ಠ
ಕಾನ್ಪುರ ಭಾರತ ತಂಡದ ಪಾಲಿಗೆ ಭದ್ರಕೋಟೆ ಇದ್ದಂತೆ. ಇಲ್ಲಿ ಕಳೆದ 41 ವರ್ಷಗಳಿಂದ ಭಾರತ ಆಡಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಸೋಲು ಕಂಡಿಲ್ಲ. 1983ರಲ್ಲಿ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 83 ರನ್‌ಗಳ ಸೋಲು ಎದುರಾಗಿತ್ತು. ಆ ಬಳಿಕ ಭಾರತ ಕಾನ್ಪುರದಲ್ಲಿ 9 ಪಂದ್ಯಗಳನ್ನಾಡಿದೆ. ಈ ಪೈಕಿ 5ರಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಒಟ್ಟಾರೆ ಭಾರತ ತಂಡ ಈ ವರೆಗೂ ಕಾನ್ಪುರದಲ್ಲಿ ಆಡಿರುವ 23 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿದೆ. 3ರಲ್ಲಿ ಸೋಲು, 13 ಪಂದ್ಯ ಡ್ರಾ ಮಾಡಿಕೊಂಡಿವೆ. ಆದರೆ, ಭಾರತ ಇಲ್ಲಿ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಸೋಲು ಕಂಡಿತ್ತು. 1952 ರಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ದದ ಪಂದ್ಯ ಇದಾಗಿತ್ತು. ಭಾರತ 8 ವಿಕೆಟ್ ಸೋಲು ಕಂಡಿತ್ತು.
ರೋಹಿತ್-ಕೊಹ್ಲಿ ಬ್ಯಾಟಿಂಗ್ ಚಿಂತೆ
ಯುವ ಆಟಗಾರರಾದ ಶುಭಮನ್ ಗಿಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್ ಜತೆಗೆ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ ಇವರೆಲ್ಲ ಮೊದಲ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಆದರೆ, ಚಿಂತೆ ಇರುವುದು ಅನುಭವಿಗಳಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮ ಮತ್ತು ಕೆ.ಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ. ರೋಹಿತ್ ಆಡಿದ ಎರಡೂ ಇನಿಂಗ್ಸ್‌ನಲ್ಲಿ ಒಂದಂಕಿ ಗಡಿ ದಾಟಲು ವಿಫಲರಾಗಿದ್ದರು. ಕೊಹ್ಲಿ ಮತ್ತು ರಾಹುಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಎರಡಂಕಿ ಮೊತ್ತ ಕಲೆಹಾಕಿದರೂ ಕೂಡ ಇವರ ಖ್ಯಾತಿಗೆ ತಕ್ಕ ಪ್ರದರ್ಶನ ಸಾಲದು. ಇದೀಗ ದ್ವಿತೀಯ ಪಂದ್ಯದಲ್ಲಿ ಆಡಲೇ ಬೇಕಾದ ಅನಿವಾರ್ಯತೆ ಇವರ ಮುಂದಿದೆ. ಒಂದೊಮ್ಮೆ ರಾಹುಲ್ ವಿಫಲವಾದರೆ ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಿಂದ ಹೊರ ಬೀಳುವುದು ಖಚಿತ.
ಇದನ್ನೂ ಓದಿ IND vs BAN 2nd Test: ಪಿಚ್ ರಿಪೋರ್ಟ್, ಆಡುವ ಬಳಗ, ಹವಾಮಾನ ವರದಿ ಹೇಗಿದೆ?
ಒಂದು ಬದಲಾವಣೆ ಖಚಿತ
ಬೌಲಿಂಗ್ ವಿಭಾಗದತ್ತ ಬಂದಾಗ ಸ್ಪಿನ್ನರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಏಕೆಂದರೆ ಕಾನ್ಪುರ ಸ್ಪಿನ್ ಟ್ಯಾಕ್. ಹೀಗಾಗಿ ಭಾರತ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡುವುದು ಬಹುತೇಕ ಖಚಿತ. ಚೆನ್ನೈ ಪಂದ್ಯಕ್ಕೆ ಮೂರು ವೇಗಿಗಳನ್ನು ಕಣಕ್ಕಿಳಿಸಿದ್ದ ಭಾರತ ಇಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಬಹುದು. ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಮೊದಲ ಆಯ್ಕೆಯ ಸಿನ್ನರ್‌ಗಳಾದರೆ, ಇವರ ಜತೆ ಮತೋರ್ವ ಸಿನ್ನರ್ ಆಗಿ ಅವಕಾಶ ಪಡೆಯಲು ಇಬ್ಬರು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತುಕುಲ್‌ದೀಪ್ ನಡುವೆ ತೀವ್ರ ಪೈಪೋಟಿ ಇದೆ. ಮೂಲಗಳ ಪ್ರಕಾರ ಚೈನಾಮನ್ ಕುಲದೀಪ್ ಯಾದವ್ ಒಳಬರಬಹುದು ಎನ್ನಲಾಗಿದೆ. ವೇಗಿಗಳ ವಿಬಾಗದಲ್ಲಿ ಅನುಭವದ ಮಾನದಂಡದಂತೆ ಜಸ್‌ಪ್ರೀತ್ ಮತ್ತು ಮೊಹಮ್ಮದ್ ಸಿರಾಜ್‌ಗೆ ಅವಕಾಶ ಜಾಸ್ತಿ.
ಅತ್ತ ಬಾಂಗ್ಲಾದೇಶ ಕೂಡಾ ಮೂವರು ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಸ್ಪಿನ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಗಾಯದಿಂದ ಚೇತರಿಕೆ ಕಂಡಿದ್ದು ತಂಡಕ್ಕೆ ಲಭ್ಯರಿದ್ದಾರೆ. ಮೊದಲ ಪಂದ್ಯ ಆಡಿದ್ದ ವೇಗಿ ನಹೀದ್ ರಾಣಾ ಬದಲು ಸಿನ್ನರ್ ತೈಜುಲ್ ಇಸ್ಲಾಂರನ್ನು ಈ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ. ಬಾಂಗ್ಲಾದೇಶದ ಬ್ಯಾಟಿಂಗ್ ಕ್ಷಿಪ್ರ ಪ್ರಗತಿ ಕಾಣದ ಹೊರತು ಪಂದ್ಯ ಗೆಲ್ಲುವುದು ಕಷ್ಟ ಸಾಧ್ಯ. ಮೊದಲ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದು ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮಾತ್ರ.