Friday, 13th December 2024

IND vs BNG: ಚೆನ್ನೈಗೆ ಆಗಮಿಸಿದ ಟೀಮ್‌ ಇಂಡಿಯಾ

IND vs BNG

ಚೆನ್ನೈ: ಬಾಂಗ್ಲಾದೇಶ(IND vs BNG) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನಾಡಲು ಟೀಮ್‌ ಇಂಡಿಯಾದ(Team India) ನಾಯಕ ರೋಹಿತ್‌ ಶರ್ಮ, ವೇಗಿ ಜಸ್‌ಪ್ರೀತ್‌ ಬುಮ್ರಾ, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌ ಸೇರಿ ಹಲವು ಆಟಗಾರರು(Team India Squad) ಗುರುವಾರ ತಡರಾತ್ರಿ ಚೆನ್ನೈಗೆ ಆಗಮಿಸಿದ್ದಾರೆ. ಆಟಗಾರರು ಚೆನ್ನೈಗೆ ಬಂದಿಳಿದ ವಿಡಿಯೊ ಮತ್ತು ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಲಂಡನ್‌ನಲ್ಲಿರುವ ವಿರಾಟ್‌ ಕೊಹ್ಲಿ ಇನ್ನಷ್ಟೇ ಭಾರತಕ್ಕೆ ಆಗಮಿಸಿ ತಂಡ ಸೇರಬೇಕಿದೆ.

ಇಂದಿನಿಂದ ಅಭ್ಯಾಸ

ಚೆನ್ನೈ ತಲುಪಿರುವ ಆಟಗಾರರು ಇಂದು ಲಘು ಅಭ್ಯಾಸ ನಡೆಸಲಿದ್ದಾರೆ. ನಾಳೆ(ಶುಕ್ರವಾರ)ಯಿಂದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಅಭ್ಯಾಸ ಆರಂಭಿಸಲಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿವೆ. 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ಆಟಗಾರರು ಭಾನುವಾರ ಚೆನ್ನೈಗೆ ತೆರಳಲಿದ್ದಾರೆ ಎನ್ನಲಾಗಿದೆ. 

ರೋಹಿತ್ ಕೊನೆಯ ಬಾರಿಗೆ ಟೆಸ್ಟ್​ ಪಂದ್ಯವನ್ನಾಡಿದ್ದು 2024 ರ ಮಾರ್ಚ್‌ನಲ್ಲಿ. ಇಂಗ್ಲೆಂಡ್ ವಿರುದ್ಧ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಮೂರನೇ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ನಲ್ಲಿ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ರೋಹಿತ್​ ಬ್ಯಾಟಿಂಗ್​ ಫಾರ್ಮ್​ ದೊಡ್ಡ ಪಾತ್ರವನ್ನು ವಹಿಸಲಿದೆ. ನೂತನ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿಯೂ ರೋಹಿತ್‌ ಪ್ರಗತಿ ಸಾಧಿಸಿ ಟಾಪ್‌ 5ರೊಳಗೆ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ Virat Kohli: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್‌ ಕೊಹ್ಲಿ

ಜೈಸ್ವಾಲ್ ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿ 712 ರನ್ ಬಾರಿಸಿದ್ದರು. ಬಾಂಗ್ಲಾ ಸರಣಿಯಲ್ಲೂ ಅವರ ಬ್ಯಾಟಿಂಗ್‌ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಟಿ20 ವಿಶ್ವಕಪ್‌ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿರುವ ಜಸ್‌ಪ್ರೀತ್‌ ಬುಮ್ರಾ ಈ ಸರಣಿಯನ್ನಾಡುವ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲಿದ್ದಾರೆ.

ಮೊದಲ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.