Friday, 13th December 2024

IND vs NZ: ವಿಕೆಟ್‌ ಪತನದಲ್ಲೂ ದಾಖಲೆ ಬರೆದ ವಾಂಖೆಡೆ

ಮುಂಬಯಿ: ಭಾರತ ಮತ್ತು ನ್ಯೂಜಿಲ್ಯಾಂಡ್‌(IND vs NZ) ವಿರುದ್ಧ ಸಾಗುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಇಂದು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಕಿವೀಸ್‌ ದ್ವಿತೀಯ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ9 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತ್ತು. ನಿನ್ನೆ ಇತ್ತಂಡಗಳದ್ದು ಸೇರಿ ಒಟ್ಟು 15 ವಿಕೆಟ್‌ ಪತನಗೊಂಡಿತ್ತು. ಎರಡೂ ದಿನಗಳ ವಿಕೆಟ್‌ಗಳನ್ನು ಸೇರಿಸಿದರೆ ಒಟ್ಟು 29 ವಿಕೆಟ್‌ಗಳು ಬಿದ್ದವು. ಇದು ವಾಂಖೆಡೆಯಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲಿ ಪತನವಾದ ಅತಿ ಹೆಚ್ಚು ವಿಕೆಟ್‌ಗಳು. ಇದಕ್ಕೂ ಮೊದಲು 2000ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ 25 ವಿಕೆಟ್‌ಗಳು ಉರುಳಿದ್ದವು.

4 ವಿಕೆಟ್‌ಗೆ 86 ರನ್‌ ಗಳಿಸಿದ್ದಲ್ಲಿಂದ ಬ್ಯಾಟಿಂಗ್‌ ಆರಂಭಿಸಿದ ಭಾರತ ನಿನ್ನೆ (ಶನಿವಾರ) 263 ರನ್‌ ಗಳಿಗೆ ಆಲೌಟಾಗುವ ಮೂಲಕ 28 ರನ್‌ಗಳ ಮುನ್ನಡೆ ಗಳಿಸಿತು. ರಿಷಭ್‌ ಪಂತ್‌ ಮತ್ತು ಶುಭಮನ್‌ ಗಿಲ್‌ ಅರ್ಧಶತಕ ಬಾರಿಸಿ ಮಿಂಚಿದರು. 1 ರನ್‌ ಗಳಿಸಿದ್ದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿದ ಪಂತ್‌ 8 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 60 ರನ್‌ ಬಾರಿಸಿದರು. ಶುಭಮನ್‌ ಗಿಲ್‌ 90(7 ಬೌಂಡರಿ, ಒಂದು ಸಿಕ್ಸರ್‌) ರನ್‌ಗೆ ಔಟಾಗುವ ಮೂಲಕ ನರ್ವಸ್‌ ನೈಂಟಿ’ ಸಂಕಟಕ್ಕೆ ಸಿಲುಕಿದರು. ಪಂತ್‌ ಮತ್ತು ಗಿಲ್‌ ಪಂದ್ಯದಲ್ಲಿ ಕ್ಯಾಚ್‌ ಕೈ ಚೆಲ್ಲಿ ತಲಾ ಒಂದೊಂದು ಜೀವದಾನ ಕೂಡ ಪಡೆದಿದ್ದರು. ಉಭಯ ಆಟಗಾರರು 5ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟ ನಡೆಸಿದರು.

ಇದನ್ನೂ ಓದಿ IND vs NZ: ಬ್ಯಾಟರ್‌ಗಳ ಕೌಶಲ್ಯ ಕುಸಿದಿಲ್ಲ; ಕೋಚ್‌ ಗಂಭೀರ್ ವಿಶ್ವಾಸ

ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ರಿಷಭ್‌ ಪಂತ್‌ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(41 ಎಸೆತ) ಹೆಸರಿನಲ್ಲಿತ್ತು. ಜೈಸ್ವಾಲ್‌ ಪುಣೆ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು.

28 ರನ್‌ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲ್ಯಾಂಡ್‌ಗೆ ವೇಗಿ ಆಕಾಶ್‌ ದೀಪ್‌ ಆರಂಭದಲ್ಲೇ ಆಘಾತವಿಕ್ಕಿದರು. ತಂಡದ ಮೊತ್ತ 2 ರನ್‌ ಆಗಿದ್ದ ವೇಳೆ ನಾಯಕ ಟಾಮ್‌ ಲ್ಯಾಥಮ್‌(1) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಬಳಿಕ ಸ್ಪಿನ್ ದ್ವಯರಾದ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಜಿದ್ದಿಗೆ ಬಿದ್ದವರಂತೆ ಬೌಲಿಂಗ್‌ ದಾಳಿ ನಡೆಸಿ ಕಿವೀಸ್‌ ಬ್ಯಾಟರ್‌ಗಳಿಗೆ ಎಲ್ಲಿಲ್ಲದಂತೆ ಕಾಡಿದರು. ಇವರ ಸ್ಪಿನ್‌ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ವಿಫಲವಾದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಟ್‌ ನಡೆಸಿದರು.

ತಂಡಕ್ಕೆ ಆಸರೆಯಾದದ್ದು ವಿಲ್‌ ಯಂಗ್‌ ಮಾತ್ರ ಭರ್ತಿ 100 ಎಸೆತ ಎದುರಿಸಿ 51 ರನ್‌ ಬಾರಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ ಯಂಗ್‌ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಗ್ಲೆನ್‌ ಫಿಲಿಪ್ಸ್‌ ಅಶ್ವಿನ್‌ ಓವರ್‌ನಲ್ಲಿ ಸತತ 2 ಸಿಕ್ಸರ್‌ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರೂ ಇದೇ ಓವರ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ವಿಕೆಟ್‌ ಒಪ್ಪಿಸಿದರು. ಮೂರು ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸಿದ ಅವರು 26 ರನ್‌ಗೆ ಆಟ ಮುಗಿಸಿದರು. ಸದ್ಯ ಜಡೇಜಾ 4, ಆರ್‌. ಅಶ್ವಿನ್‌ 3, ವಾಷಿಂಗ್ಟನ್‌ ಸುಂದರ್‌ ಮತ್ತು ವೇಗಿ ಆಕಾಶ್‌ ದೀಪ್‌ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.