Wednesday, 11th December 2024

IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌

ಮುಂಬಯಿ: ಭಾರತ ತಂಡ ಸತತ 2 ಟೆಸ್ಟ್​ ಸೋಲಿನೊಂದಿಗೆ ನ್ಯೂಜಿಲೆಂಡ್(IND vs NZ 3rd Test)​ ಎದುರಿನ ಸರಣಿ ಕಳೆದುಕೊಂಡು ವೈಟ್‌ವಾಶ್‌ ಭೀತಿಯಲ್ಲಿರುವ ಕಾರಣ ಇದೀಗ ಮುಂಬೈ ಟೆಸ್ಟ್‌ ಪಂದ್ಯಕ್ಕೆ ಬ್ಯಾಟಿಂಗ್‌ಗೆ ಸಹಕರಿಸುವಂಥ ಸ್ಪರ್ಧಾತ್ಮಕ ಪಿಚ್‌ ಸಿದ್ಧಪಡಿಸಲಿದೆ ಎಂದು ವರದಿಯಾಗಿದೆ. ಕೆಂಪು ಮಣಿನ ಈ ಪಿಚ್‌ನ ಫೋಟೊ ಎಲ್ಲಡೆ ವೈರಲ್‌ ಆಗಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ಗೆ ವೇಗದ ಬೌಲಿಂಗ್‌ ಸ್ನೇಹಿ ಮತ್ತು ಪುಣೆ ಟೆಸ್ಟ್‌ಗೆ ಸ್ಪಿನ್‌ ಟ್ರ್ಯಾಕ್‌ ಮಾಡಿ ಕೈ ಸುಟ್ಟುಕೊಂಡಿರುವ ಭಾರತ ಅಂತಿಮ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಮೊರೆಹೋಗಿದೆ. ಕಠಿಣ ಸ್ಪಿನ್‌ ಟ್ರ್ಯಾಕ್‌ನಲ್ಲಿಯೇ ದಿಟ್ಟ ಬ್ಯಾಟಿಂಗ್‌ ನಡೆಸಿ ಪಾರಮ್ಯ ಮೆರೆದಿದ್ದ ಕಿವೀಸ್‌ ಬ್ಯಾಟಿಂಗ್‌ ಪಿಚ್‌ನಲ್ಲಿ ಇನೆಷ್ಟು ದೊಡ್ಡ ಮೊತ್ತದ ಸ್ಕೋರ್‌ ದಾಖಲಿಸಬಹುದು ಎಂಬ ಊಹೆಯನ್ನು ಮಾಡುವುದು ಕೂಡ ಇಲ್ಲಿ ಕಷ್ಟ.

ವಾಂಖೆಡೆ ಸ್ಟೇಡಿಯಂನಲ್ಲಿ(Wankhede Stadium) ಕೆಂಪು ಮಣಿನ ಪಿಚ್‌ ರಚಿಸಲಾಗಿದ್ದು, ಇದು ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ಗೆ ಹೆಚ್ಚಿನ ಸಹಕಾರ ನೀಡುವ ಸಾಧ್ಯತೆ ಇದೆ. ಆ ಬಳಿಕ ಪಿಚ್‌ ಸ್ಪಿನ್‌ ಟ್ರ್ಯಾಕ್‌ ಆಗಿ ಬದಲಾಗುವ ಸಾಧ್ಯತೆ ಇದೆ. 2021ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಕಿವೀಸ್‌ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ ಉಡಾಯಿಸಿ ಇತಿಹಾಸ ನಿರ್ಮಿಸಿದ್ದರು.

ಸೋಲಿನ ಬೆನ್ನಲ್ಲೇ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್​ 1ರಂದು ಆರಂಭಗೊಳ್ಳಲಿರುವ ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯಕ್ಕೆ ಮುನ್ನ ಅಕ್ಟೋಬರ್​ 30 ಮತ್ತು 31 ರಂದು ನಡೆಯಲಿರುವ ನೆಟ್ಸ್​ ಅಭ್ಯಾಸದಲ್ಲಿ ತಂಡದ ಎಲ್ಲ ಆಟಗಾರರು ಪಾಲ್ಗೊಳ್ಳುವುದು ಕಡ್ಡಾಯ ಎಂದು ಗಂಭೀರ್​ ಸೂಚಿಸಿದ್ದಾರೆ. ಯಾವ ಆಟಗಾರರಿಗೂ ಅಭ್ಯಾಸದಿಂದ ವಿನಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಂತೆ ಆಟಗಾರರೆಲ್ಲ ಬುಧವಾರ ಕಠಿಣ ಅಭ್ಯಾಸ ನಡೆಸಲಿದ್ದಾರೆ.

ಇದನ್ನೂ ಓದಿ IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ

ಮೂರನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಡೆಲ್ಲಿ ಮೂಲಕ ಯುವ ವೇಗಿ ಹರ್ಷಿತ್ ರಾಣಾ(Harshit Rana) ಭಾರತ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಚೊಚ್ಚಲ ಕರೆ ಪಡೆದಿರುವ ಅವರು ಮುಂಬೈ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ಸರಣಿಗಾಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಕಣಕ್ಕಿಳಿಯಬಹುದು. ರಾಣಾ ಕೂಡ ಆಸೀಸ್‌ ಸರಣಿಗೆ ಆಯ್ಕೆಯಾಗಿದ್ದಾರೆ.