Saturday, 14th December 2024

IND vs NZ: ಸೋಲಿನ ಭೀತಿಯಲ್ಲಿ ಭಾರತ

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್‌ ಮತ್ತು ಆತಿಥೇಯ ಭಾರತ ನಡುವಿನ ಮೊದಲ ಟೆಸ್ಟ್‌ ಕೊನೆಗೂ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್ನಿಗೆ ಕುಸಿದು ಇನಿಂಗ್ಸ್‌ ಸೋಲಿನ ಭೀತಿಯಲ್ಲಿದ್ದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್‌ ಹೋರಾಟ ನಡೆಸಿ 106 ರನ್‌ ಮುನ್ನಡೆ ಸಾಧಿಸಿದರೂ ಸೋಲಿನ ಸುಳಿಯಿಂದ ಪಾರಾಗಿಲ್ಲ. ಗಾಯದ ಮಧ್ಯೆಯೂ ಪಂತ್‌ ಅಮೋಘ ಅರ್ಧಶತಕ, ಸರ್ಫರಾಜ್‌ ಖಾನ್‌ ಬಾರಿಸಿದ ಚೊಚ್ಚಲ ಶತಕ ನಾಲ್ಕನೇ ದಿನದಾಟದ ಆಕರ್ಷಣೆಯಾಗಿತ್ತು.

ಭಾರತ ನಾಲ್ಕನೇ ದಿನ 462 ರನ್‌ ಗಳಿಸಿ ಆಲೌಟ್‌ ಆಯಿತು. 107 ರನ್‌ ಗೆಲುವಿನ ಗುರಿ ಬೆನ್ನಟ್ಟುತ್ತಿರುವ ನ್ಯೂಜಿಲ್ಯಾಂಡ್‌ ಖಾತೆ ತೆರೆಯದೆ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಬುಮ್ರಾ ಎಸೆತ ಇನಿಂಗ್ಸ್‌ನ ಮೊದಲ ಓವರ್‌ನ ನಾಲ್ಕು ಎಸೆತ ಪೂರ್ಣಗೊಂಡ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಂತಿಮ ದಿನವಾದ ನಾಳೆ ಮಳೆಯಿಂದ ಪಂದ್ಯ ರದ್ದಾದರೆ ಭಾರತ ಸೋಲಿನ ಭೀತಿಯಿಂದ ಪಾರಾಗಬಹುದು. ಇಲ್ಲವಾದಲ್ಲಿ ಬೌಲರ್‌ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್‌ ಮೂಲಕ ವಿಕೆಟ್‌ ಬೇಟೆಯಾಡಬೇಕು.

ಮೂರು ವಿಕೆಟಿಗೆ 231 ರನ್ನಿನಿಂದ ದಿನದಾಟ ಆರಂಭಿಸಿದ ಭಾರತಕ್ಕೆ ರಿಷಭ್‌ ಪಂತ್‌ ಮತ್ತು ಸರ್ಫರಾಜ್‌ ಖಾನ್‌ ಜೋಡಿಯ ಅಮೋಘ ಬ್ಯಾಟಿಂಗ್‌ ನೆರವು ಲಭಿಸಿತು. ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿ ಕಿವೀಸ್‌ ಬೌಲರ್‌ಗಳಿಗೆ ಸಿಕ್ಸರ್‌ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಪಂತ್‌ ಚಿನ್ನಸ್ವಾಮಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್‌ ಬಾರಿಸಿ ನೆರದಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಟಿ20 ಆಟದ ಮನರಂಜನೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಅತ್ಯಮೂಲ್ಯ 177 ರನ್‌ಗಳ ಜತೆಯಾಟ ನಡೆಸಿದರು. ಅಂತಿಮವಾಗಿ ಭಾರತ 462 ರನ್‌ ಗಳಿಸಿ ಆಲೌಟ್‌ ಆಯಿತು.

ಮೊಣಕಾಲಿನ ಗಾಯವನ್ನೂ ಲೆಕ್ಕಿಸದೆ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಪಂತ್‌ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಉತ್ತಮವಾಗಿ ಆಡುತ್ತಿದ್ದ ಪಂತ್‌ 99ರನ್‌ ಬಾರಿಸಿದ್ದ ವೇಳೆ ಟಿಮ್‌ ಸೌಥಿ ಎಸೆತವನ್ನು ಡಿಫೆನ್ಸ್‌ ಮಾಡುವ ವೇಳೆ ಚೆಂಡು ಮೊದಲು ಬ್ಯಾಟ್‌ಗೆ ತಾಗಿ ವಿಕೆಟ್‌ ಮೇಲೆ ಬಿದ್ದ ಪರಿಣಾಮ ಔಟ್‌ ಆಗಿ ಶತಕ ವಂಚಿತರಾದರು. ಅವರ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ ಸಿಡಿಯಿತು. ಪಂತ್‌ ವಿಕೆಟ್‌ ಬಿದ್ದ ವೇಳೆ ಅಭಿಮಾನಿಗಳ ಮತ್ತು ಡ್ರೆಸಿಂಗ್‌ ರೂಮ್‌ನಲ್ಲಿದ್ದ ಭಾರತೀಯ ಆಟಗಾರರ ಮುಖದಲ್ಲಿ ಮೂಡಿದ ಆಘಾತ ಭಾವದ ಚಿತ್ರಗಳು ಜಾಲತಾಣದಲ್ಲಿ ವೈರಲ್‌ ಆಗಿದೆ.

ಧೋನಿ ದಾಖಲೆ ಮುರಿದ ಪಂತ್‌

ಪಂತ್‌ ಟೆಸ್ಟ್‌ನಲ್ಲಿ ಅತಿ ವೇಗವಾಗಿ 2500 ರನ್‌ಗಳನ್ನು ತಲುಪಿದ ಮೊದಲ ಭಾರತೀಯ ವಿಕೆಟ್‌ಕೀಪರ್ ಎಂಬ ಮೈಲುಗಲ್ಲು ನೆಟ್ಟರು. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಹೆಸರಿನಲ್ಲಿತ್ತು. ಧೋನಿ 69 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ನಿರ್ಮಿಸಿದರೆ, ಪಂತ್‌ ಕೇವಲ 62 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಇದೇ ವೇಳೆ ಭಾರತ ಪರ ವಿಕೆಟ್‌ ಕೀಪರ್‌ ಆಗಿ ಟೆಸ್ಟ್‌ನಲ್ಲಿ ಅತ್ಯಧಿಕ ಅರ್ಥಶತಕ ಬಾರಿಸಿದ ಮಾಜಿ ಆಟಗಾರ ಫಾರೂಕ್ ಇಂಜಿನಿಯರ್ ದಾಖಲೆ ಸರಿಗಟ್ಟಿದರು. ಉಭಯ ಆಟಗಾರರು 18 ಅರ್ಥಶತಕ ಬಾರಿಸಿದ್ದಾರೆ. ದಾಖಲೆ ಧೋನಿ(39) ಹೆಸರಿನಲ್ಲಿದೆ.

ಚೊಚ್ಚಲ ಶತಕ ಬಾರಿಸಿದ ಸರ್ಫರಾಜ್‌

ಬೆಳಗ್ಗೆ 70 ರನ್‌ ಗಳಿಂದ ಬ್ಯಾಟಿಂಗ್‌ ಆರಂಭಿಸಿದ ಸರ್ಫರಾಜ್‌ ಖಾನ್‌ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಬಿರುಸಿನ ಬ್ಯಾಟಿಂಗ್‌ ಮೂಲಕ 195 ಎಸೆತಗಳಿಂದ ಭರ್ತಿ 150 ರನ್‌ ಚಚ್ಚಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿದರು. ಪಂತ್‌ ಮತ್ತು ಸರ್ಫರಾಜ್‌ ವಿಕೆಟ್‌ ಪತನದ ಬಳಿಕ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಆಡಲಿಳಿದ ಕೆ.ಎಲ್‌ ರಾಹುಲ್‌(12) ಮತ್ತು ರವೀಂದ್ರ ಜಡೇಜಾ(5) ಕಳಪೆ ಬ್ಯಾಟಿಂಗ್‌ ನಡೆಸಿ ವಿಕೆಟ್‌ ಕೈಚೆಲ್ಲಿದರು. ಮೊದಲ ಇನಿಂಗ್ಸ್‌ನಲ್ಲಿ ಉಭಯ ಆಟಗಾರರು ಶೂನ್ಯ ಸುತ್ತಿದ್ದರು. ಅನುಭವಿ ಆಲ್‌ರೌಂಡರ್‌ ಆರ್‌.ಅಶ್ವಿನ್‌ ಕೆಳ ಕ್ರಮಾಂಕದಲ್ಲಿ ಕೆಲ ಹೊತ್ತು ಕ್ರೀಸ್‌ ಆಕ್ರಮಿಸಿಕೊಂಡರೂ ಇವರ ಆಟ 15 ರನ್‌ಗೆ ಕೊನೆಗೊಂಡಿತು. ನ್ಯೂಜಿಲೆಂಡ್‌ ಪರ ಮ್ಯಾಟ್‌ ಹೆನ್ರಿ ಮತ್ತು ವಿಲಿಯಂ ಓರ್ಕೆ ತಲಾ ಮೂರು ವಿಕೆಟ್‌ ಕಿತ್ತರೆ, ಅಜಾಜ್‌ ಪಟೇಲ್‌ 2 ವಿಕೆಟ್‌ ಪಡೆದರು.