Wednesday, 11th December 2024

IND vs NZ: ಸರ್ಫರಾಜ್‌ ಶತಕ; ಮುನ್ನಡೆಯತ್ತ ಭಾರತ

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ದದ ಮೊದಲ ಟೆಸ್ಟ್‌ನ ಆರಂಭಿಕ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಭಾರತ ಇದೀಗ ದ್ವಿತೀಯ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಲಾರಂಭಿಸಿದೆ. ರೋಹಿತ್‌ ಮತ್ತು ವಿರಾಟ್‌ ಕೊಹ್ಲಿಯ ಅರ್ಧಶತಕದ ಬಳಿಕ ಶತಕ ಬಾರಿಸಿದ ಸರ್ಫರಾಜ್‌ ಖಾನ್‌(Sarfaraz Khan) ಬ್ಯಾಟಿಂಗ್‌ ಹೋರಾಟದಿಂದ ಭಾರತ ಸದ್ಯ ಮುನ್ನಡೆಯತ್ತ ಸಾಗುತ್ತಿದೆ. ಮಳೆಯಿಂದ ಸದ್ಯ ಪಂದ್ಯ ಸ್ಥಗಿತಗೊಂಡಿದ್ದು ಭಾರತ 3 ವಿಕೆಟ್‌ಗೆ 344 ರನ್‌ ಬಾರಿಸಿ 12 ರನ್‌ ಹಿನ್ನಡೆಯಲ್ಲಿದೆ.

ಶನಿವಾರ ಬೆಳಗ್ಗೆ 70 ರನ್‌ ಗಳಿಂದ ಬ್ಯಾಟಿಂಗ್‌ ಆರಂಭಿಸಿದ ಸರ್ಫರಾಜ್‌ ಖಾನ್‌ ಶತಕ ಬಾರಿಸಿ ಸಂಭ್ರಮಿಸಿದರು. ಇದು ಸರ್ಫರಾಜ್‌ ಬಾರಿಸಿದ ಚೊಚ್ಚಲ ಟೆಸ್ಟ್‌ ಶತಕವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಸರ್ಫರಾಜ್‌ ತಂಡ ಸಂಕಷ್ಟದಲ್ಲಿದ್ದಾಗಲೇ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ನೆರವಾದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಶುಭಮನ್‌ ಗಿಲ್‌ ಅವರಿಗೆ ಕುತ್ತಿಗೆ ನೋವು ಕಾಣಸಿಕೊಂಡ ಕಾರಣ ಸರ್ಫರಾಜ್‌ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು.

ಶತಕ ಬಾರಿಸಿದ ಕಾರಣ ದ್ವಿತೀಯ ಟೆಸ್ಟ್‌ನಲ್ಲಿಯೂ ತಂಡದಲ್ಲಿ ಸ್ಥಾನ ಖಚಿತ. ಸರ್ಫರಾಜ್‌(125*) ಮತ್ತು ರಿಷಭ್‌ ಪಂತ್‌(53*) ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟದ ವೇಲೆ ಕೀಪಿಂಗ್‌ ಮಾಡುವಾಗ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್‌ ಪಂತ್‌ ಬ್ಯಾಟಿಂಗ್‌ ನಡೆಸುತ್ತಿದ್ದು ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಇದನ್ನೂ ಓದಿ IND vs NZ: ಸೆಹವಾಗ್‌ ಸಿಕ್ಸರ್‌ ದಾಖಲೆ ಮುರಿದ ವೇಗಿ ಸೌಥಿ

ವಿರಾಟ್‌ ಕೊಹ್ಲಿ ಮತ್ತು ಸರ್ಫರಾಜ್‌ ಖಾನ್‌ ಮೂರನೇ ವಿಕೆಟಿಗೆ 136 ರನ್ನುಗಳ ಜತೆಯಾಟ ನಡೆಸಿದ್ದರು. ಮೂರನೇ ದಿನದಾಟ ಅಂತ್ಯಗೊಳ್ಳಲು ಸ್ವಲ್ಪವೇ ಸಮಯವಿರುಗಾಗ 70 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಔಟಾಗಿ ನಿರಾಸೆ ಅನುಭವಿಸಿದ್ದರು.

ನ್ಯೂಜಿಲ್ಯಾಂಡ್‌ ವಿರುದ್ಧ 70 ರನ್‌ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ 9000 ರನ್‌ ಪೂರೈಸಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಸಚಿನ್‌ ತೆಂಡುಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265), ಸುನೀಲ್‌ ಗಾವಸ್ಕರ್‌ (10,122) ಈ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನದಲ್ಲಿದ್ದಾರೆ.