Thursday, 12th December 2024

IND vs SA 3rd T20I Match Preview: ಸೆಂಚುರಿಯನ್‌ನಲ್ಲಿ ಕಮ್‌ಬ್ಯಾಕ್‌ ಮಾಡುತ್ತಾ ಟೀಮ್‌ ಇಂಡಿಯಾ?

IND vs SA 3rd T20I Match Preview

ಸೆಂಚುರಿಯನ್‌: ಆರಂಭಿಕ ಎರಡು ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (IND vs SA 3rd T20I Match Preview) ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಟಿ20ಐ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ಇದೀಗ ಉಭಯ ತಂಡಗಳು ಬುಧವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುವ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿವೆ.

2009ರ ಬಳಿಕ ಇಲ್ಲಿಯವರೆಗೂ ಭಾರತ ತಂಡ ಸೆಂಚುರಿಯನ್‌ನಲ್ಲಿ ಆಡಿರುವುದು ಕೇವಲ ಒಂದೇ ಒಂದು ಟಿ20ಐ ಪಂದ್ಯ ಮಾತ್ರ. ಕೊನೆಯ ಪಂದ್ಯ 2018ರಲ್ಲಿ ಆಡಿದ್ದ ಭಾರತ ತಂಡ ಆರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಅಂದಿನ ತಂಡದಲ್ಲಿ ಆಡಿದ್ದ ಹಾರ್ದಿಕ್‌ ಪಾಂಡ್ಯ ಮಾತ್ರ ಇದೀಗ ಮೂರನೇ ಪಂದ್ಯದಲ್ಲಿ ಆಡುತ್ತಿದ್ದಾರೆ. ಇನ್ನುಳಿದ ಎಲ್ಲಾ ಆಟಗಾರರು ಕೂಡ ಹೊಸಬರಾಗಿದ್ದಾರೆ.

ಮೊದಲನೇ ಪಂದ್ಯದಲ್ಲಿ 61ರನ್‌ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ, ಮೆಬೇಕದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಮೆಬೇಕೆದಲ್ಲಿನ ಪಿಚ್‌ ರೀತಿಯಲ್ಲಿಯೇ ಸೆಂಚುರಿಯನ್‌ ಪಿಚ್‌ ಕೂಡ ಸ್ಪಿನ್ನರ್‌ಗಳ ಸ್ನೇಹಿಯಾಗಿದೆ. ಇಲ್ಲಿಯೂ ಕೂಡ ಚೆಂಡು ವೇಗ ಮತ್ತು ಬೌನ್ಸ್‌ ಅನ್ನು ಹೊಂದಿದೆ.

ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾಗಿದ್ದರು. ಅದರಂತೆ ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳು ಭಾರತ ತಂಡವನ್ನು 6 ವಿಕೆಟ್‌ ನಷ್ಟಕ್ಕೆ 124 ರನ್‌ಗಳಿಗೆ ನಿಯಂತ್ರಿಸಿತ್ತು. ಸೆಂಚುರಿಯನ್‌ನಲ್ಲಿಯೂ ಪಿಚ್‌ ಕಂಡೀಷನ್ಸ್‌ ಒಂದೇ ರೀತಿ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ಭಾರತ ತಿದ್ದಿಕೊಳ್ಳಬೇಕಾದ ಅಗತ್ಯವಿದೆ.

ಅಭಿಷೇಕ್‌ ಶರ್ಮಾ ಸತತ ವೈಫಲ್ಯ

ಅದರಲ್ಲಿಯೂ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಅಭಿಷೇಕ್‌ ಶರ್ಮಾ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿಯೂ ಅವರು ವೈಫಲ್ಯ ಅನುಭವಿಸಿದ್ದರು. ಇದು ನಾಯಕ ಸೂರ್ಯಕುಮಾರ್‌ ಯಾದವ್‌ಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಇವರ ಸಹ ಆರಂಭಿಕ ಸಂಜು ಸ್ಯಾಮ್ಸನ್‌ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದರೆ, ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು. ಇದರ ಹೊರತಾಗಿಯೂ ಇದೇ ಆರಂಭಿಕ ಜೋಡಿಯನ್ನು ಇನಿಂಗ್ಸ್‌ ಆರಂಭಿಸಲು ಟೀಮ್‌ ಮ್ಯಾನೇಜ್‌ಮೆಂಟ್‌ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಓಪನರ್ಸ್‌ ಬದಲಿಸಬೇಕೆಂದು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಿದರೆ, ರಮಣದೀಪ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ತಿಲಕ್‌ ವರ್ಮಾಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ಕಲ್ಪಿಸಬಹುದು. ನಾಯಕ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಹಾಗೂ ರಿಂಕು ಸಿಂಗ್‌ ಅವರು ಇನ್ನುಳಿದ ಕ್ರಮಾಂಕಗಳಲ್ಲಿ ಮುಂದುವರಿಯಲಿದ್ದಾರೆ.

ವೈಶಾಖ್‌ ವಿಜಯ್‌ಕುಮಾರ್‌ಗೆ ಸ್ಥಾನ ಸಾಧ್ಯತೆ

ಇನ್ನು ತಂಡದ ವೇಗದ ಬೌಲಿಂಗ್‌ ಬಗ್ಗೆ ಮಾತನಾಡುವುದಾದರೆ ಅರ್ಷದೀಪ್‌ ಸಿಂಗ್‌ ಕಳೆದ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದರು. ಡರ್ಬನ್‌ನಲ್ಲಿ 25 ರನ್‌ ನೀಡಿದ್ದ ಅರ್ಷದೀಪ್‌, ಎರಡನೇ ಪಂದ್ಯದಲ್ಲಿ 41ರನ್‌ ನೀಡುವ ಮೂಲಕ ಅತ್ಯಂತ ದುಬಾರಿಯಾಗಿದ್ದರು. ಅದರಲ್ಲಿಯೂ ಎಡಗೈ ವೇಗಿ ತಮ್ಮ ನಾಲ್ಕನೇ ಓವರ್‌ನಲ್ಲಿ ಬರೋಬ್ಬರಿ 28 ರನ್‌ ಕೊಟ್ಟು ದುಬಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡಿಗ ವೈಶಾಖ್‌ ವಿಜಯ್‌ಕುಮಾರ್‌ಗೆ ಅಂತಾರಾಷ್ಟ್ರೀಯ ಟಿ20ಐಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದರೂ ಅಚ್ಚರಿ ಇಲ್ಲ.

ಪಿಚ್‌ ರಿಪೋರ್ಟ್‌

ಮೂರನೇ ಟಿ20ಐ ಪಂದ್ಯ ನಡೆಯುವ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಪಿಚ್‌ ಬೌನ್ಸ್‌ ಹಾಗೂ ವೇಗದಿಂದ ಕೂಡಿದೆ. ಅದರಲ್ಲಿಯೂ ಫಾಸ್ಟ್‌ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಭೀತಿಯನ್ನುಂಟು ಮಾಡಲಿದ್ದಾರೆ. ಇನ್ನು ಹೆಚ್ಚುವರಿ ಬೌನ್ಸ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಇಲ್ಲಿ ನಡೆದಿರುವ 14 ಟಿ20ಐ ಪಂದ್ಯಗಳ ಪೈಕಿ ಎಂಟು ಪಂದ್ಯಗಳು ಚೇಸಿಂಗ್‌ ತಂಡಗಳೇ ಗೆದ್ದಿವೆ. ಹಾಗಾಗಿ ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

IND vs SA: ʻಅಕ್ಷರ್‌ ಪಟೇಲ್‌ ಬೌಲ್‌ ಮಾಡಿದ್ದು ಕೇವಲ ಒಂದೇ ಓವರ್‌ʼ- ಸೂರ್ಯ ವಿರುದ್ಧ ಆಕಾಶ್‌ ಚೋಪ್ರಾ ಕಿಡಿ!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ/ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ರಮಣ್‌ದೀಪ್‌ ಸಿಂಗ್‌/ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌/ವೈಶಾಖ್‌ ವಿಜಯ್‌ಕುಮಾರ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌

ದಕ್ಷಿಣ ಆಫ್ರಿಕಾ: ರಿಯಾನ್‌ ರಿಕಲ್ಟನ್‌, ರೀಝಾ ಹೆಂಡ್ರಿಕ್ಸ್‌, ಏಡೆನ್‌ ಮಾರ್ಕ್ರಮ್‌ (ನಾಯಕ), ಟ್ರಿಸ್ಟನ್‌ ಸ್ಟಬ್ಸ್‌, ಹೆನ್ರಿಚ್‌ ಕ್ಲಾಸೆನ್‌ (ವಿ.ಕೀ), ಡೇವಿಡಗ್‌ ಮಿಲ್ಲರ್‌, ಮಾರ್ಕೊ ಯೆನ್ಸನ್‌, ಆಂಡಿಲೆ ಸಿಮೆಲೇನ್‌, ಜೆರಾಲ್ಡ್‌ ಕೊಯೆಡ್ಜಿ, ಕೇಶವ್‌ ಮಹಾರಾಜ್‌, ಎನ್‌ ಪೀಟರ್‌

ಪಂದ್ಯದ ವಿವರ

ಭಾರತ VS ದಕ್ಷಿಣ ಆಫ್ರಿಕಾ
ಮೂರನೇ ಟಿ20ಐ ಪಂದ್ಯ
ದಿನಾಂಕ: ನವೆಂಬರ್‌ 13, 2024
ಸಮಯ: ರಾತ್ರಿ 08: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಸೂಪರ್‌ಸ್ಪೋರ್ಟ್‌ ಪಾರ್ಕ್‌, ಸೆಂಚುರಿಯನ್‌
ನೇರ ಪ್ರಸಾರ: ಸ್ಪೋರ್ಟ್ಸ್‌ 18
ಲೈವ್‌ ಸ್ಟ್ರೀಮಿಂಗ್‌: ಜಿಯೋ ಸಿನಿಮಾ