Saturday, 23rd November 2024

IND vs SA: ʻಐಪಿಎಲ್‌ ಮೆಗಾ ಹರಾಜಿನಲ್ಲಿ ಮಾರ್ಕೊ ಯೆನ್ಸನ್‌ 10 ಕೋಟಿ ರೂ ಪಡೆಯುವುದು ಪಕ್ಕಾʼ-ಡೇಲ್‌ ಸ್ಟೇನ್‌!

IND vs SA: Dale Steyn predicts Marco Jansen to get sold for Rs 10 Crore in IPL Mega auction

ಸಂಚುರಿಯನ್‌: ಭಾರತ ತಂಡದ ವಿರುದ್ದ ಮೂರನೇ ಟಿ20ಐ ಪಂದ್ಯದಲ್ಲಿ (IND vs SA) ಸ್ಪೋಟಕ ಅರ್ಧಶತಕ ಸಿಡಿಸಿದ ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡರ್‌ ಮಾರ್ಕೊ ಯೆನ್ಸನ್‌ ಅವರನ್ನು ವೇಗದ ಬೌಲಿಂಗ್‌ ದಿಗ್ಗಜ ಡೇಲ್‌ ಸ್ಟೇನ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಮುಂಬರುವ 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಮಾರ್ಕೊ ಯೆನ್ಸನ್‌ ಅವರು 10ಕೋಟಿ ರೂ. ಗಳನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆಂದು ಸ್ಟೇನ್‌ ಭವಿಷ್ಯ ನುಡಿದಿದ್ದಾರೆ.

ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನವೆಂಬರ್‌ 24 ಮತ್ತು 25 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿಗೆ ತಮ್ಮ-ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿರುವ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಅದರಂತೆ ಆಲ್‌ರೌಂಡರ್‌ಗಳಿಗೆ ಮೆಗಾ ಹರಾಜಿನಲ್ಲಿ ಕೋಟಿ-ಕೋಟಿ ರೂ. ಜೇಬಿಗಿಳಿಸಿಕೊಳ್ಳುವ ಸಾಧ್ಯತೆ ಇದೆ.

IND vs SA: ಸತತ ಎರಡನೇ ಬಾರಿ ಡಕ್‌ಔಟ್‌ ಆಗಿ ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ಆಲ್‌ರೌಂಡ್‌ ಆಟದಿಂದ ಮಿಂಚಿ ಮಾರ್ಕೊ ಯೆನ್ಸನ್‌

ಅಂದ ಹಾಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ನೀಡಿದ್ದ 220 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯೆನ್ಸನ್‌ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಅವರು ಎದುರಿಸಿದ್ದ ಕೇವಲ 17 ಎಸೆತಗಳಲ್ಲಿ ಅಜೇಯ 54 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ನಾಲ್ಕು ಬೌಂಡರಿಗಳು ಹಾಗೂ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದರು. 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು ದಕ್ಷಿಣ ಆಫ್ರಿಕಾ ಪರ ವೇಗದ ಫಿಫ್ಟಿ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅವರು ಬೌಲ್‌ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ ಕೇವಲ 28 ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದರು. ಮಾರ್ಕೊ ಯೆನ್ಸನ್‌ ಆಲ್‌ರೌಂಡರ್‌ ಪ್ರದರ್ಶನದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ಕೇವಲ 11ರನ್‌ಗಳಿಂದ ಸೋಲು ಅನುಭವಿಸಿತ್ತು.

ಮಾರ್ಕೊ ಯೆನ್ಸನ್‌ 10 ಕೋಟಿ ರೂ. ಗಳ ಆಟಗಾರ

ಮೂರನೇ ಟಿ20ಐ ಪಂದ್ಯದಲ್ಲಿ ಮಾರ್ಕೊ ಯೆನ್ಸನ್‌ ಅವರ ಆಲ್‌ರೌಂಡರ್‌ ಪ್ರದರ್ಶನವನ್ನು ಗಮನಿಸಿದ ದಕ್ಷಿಣ ಆಫ್ರಿಕಾ ವೇಗದ ಬೌಲಿಂಗ್‌ ದಿಗ್ಗಜ ಡೇಲ್‌ ಸ್ಟೇನ್‌ ಅವರು ತಮ್ಮ ಟ್ವಿಟರ್‌ ಪೋಸ್ಟ್‌ ಮೂಲಕ ದೊಡ್ಡ ಭವಿಷ್ಯ ನುಡಿದಿದ್ದಾರೆ. “ಮಾರ್ಕೊ ಯೆನ್ಸನ್‌ ಮೆಗಾ ಹರಾಜಿನಲ್ಲಿ 10 ಕೋಟಿ ರೂ. ಗಳ ಆಟಗಾರ ಎಂದು ನಾನು ಹೇಳಲು ಬಯಸುತ್ತೇನೆ,” ಎಂದು ಡೇಲ್‌ ಸ್ಟೇನ್‌ ಟ್ವೀಟ್‌ ಮಾಡಿದ್ದಾರೆ.

ಆರಂಭಿಕ ಎರಡೂ ಪಂದ್ಯಗಳಲ್ಲಿಯೂ ಮಿಂಚ್ಚಿದ್ದ ಯೆನ್ಸನ್‌

ಅಂದ ಹಾಗೆ ಭಾರತ ತಂಡ ನೀಡಿದ್ದ 220 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಮುಗಿಸಿದರೂ 7ವಿಕೆಟ್‌ಗಳ ನಷ್ಟಕ್ಕೆ 208 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 11 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಆ ಮೂಲಕ ಟಿ20 ಸರಣಿಯಲ್ಲಿ ಆತಿಥೇಯರು 1-2 ಹಿನ್ನಡೆಯನ್ನು ಅನುಭವಿಸಿದ್ದಾರೆ. ಇನ್ನು ಆರಂಭಿಕ ಎರಡು ಪಂದ್ಯಗಳ ಯೆನ್ಸನ್‌ ಬೌಲಿಂಗ್‌ನಲ್ಲಿ ಮಿಂಚಿದ್ದರು. ಮೊದಲನೇ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 24 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ ನಾಲ್ಕು ಓವರ್‌ಗಳಿಗೆ ಕೇವಲ 25ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು.