Tuesday, 10th December 2024

IND vs SA: ಸ್ಫೋಟಕ ಅರ್ಧಶತಕ ಸಿಡಿಸಿ ಭಾರತ ವಿರುದ್ಧ ದಾಖಲೆ ನಿರ್ಮಿಸಿದ ಮಾರ್ಕೊ ಜಾನ್ಸೆನ್‌

ಸೆಂಚುರಿಯನ್‌: ಬುಧವಾರ ನಡೆದಿದ್ದ ದೊಡ್ಡ ಮೊತ್ತದ ಟಿ20 ಮೇಲಾಟದಲ್ಲಿ(IND vs SA) ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 11 ರನ್‌ ಅಂತರದಿಂದ ಮಣಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಹಾಗೂ ಅಂತಿಮ ಪಂದ್ಯ ನಾಳೆ(ಶುಕ್ರವಾರ) ನಡೆಯಲಿದೆ. ನಿನ್ನೆ ನಡೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಗಮನಸೆಳೆದ ಮಾರ್ಕೊ ಜಾನ್ಸೆನ್‌(Marco Jansen) ದಾಖಲೆಯೊಂದನ್ನು ಬರೆದಿದ್ದಾರೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 6 ವಿಕೆಟ್‌ಗೆ 219 ರನ್‌ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟುವ ವೇಳೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಮಾರ್ಕೊ ಜಾನ್ಸೆನ್‌ ಸಿಡಿದು ನಿಂತು ಕೇವಲ 16 ಎಸೆತಗಳಿಂದ ಅರ್ಥಶತಕ ಬಾರಿಸಿದರು. ಈ ವೇಳೆ ಟಿ20ಯಲ್ಲಿ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ದ್ವಿತೀಯ ಬ್ಯಾಟರ್‌ ಎನಿಸಿಕೊಂಡರು. ಕ್ವಿಂಟನ್‌ ಡಿ ಕಾಕ್‌(15 ಎಸೆತ) ಮೊದಲಿಗ. ಭಾರತ ವಿರುದ್ಧ ಈ ಸಾಧನೆಗೈದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಯೂ ಮಾರ್ಕೊ ಜಾನ್ಸೆನ್‌ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಕ್ಯಾಮರೂನ್‌ ಗ್ರೀನ್‌(19 ಎಸೆತ) ಹೆಸರಿನಲ್ಲಿತ್ತು.

ಕಳಪೆ ದಾಖಲೆ ಬರೆದ ಸಂಜು

ಆರಂಭಿಕ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌ ಆ ಬಳಿಕದ ಎರಡು ಪಂದ್ಯಗಳಲ್ಲಿ ಡಕೌಟ್‌ ಆಗಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಮೂರನೇ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು ಸ್ಯಾಮ್ಸನ್‌ ಅವರು 2024ರಲ್ಲಿ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಐದನೇ ಬಾರಿ ಡಕ್‌ಔಟ್‌ ಆಗಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ನ ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಐದು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎರಡನೇ ಟಿ20ಐ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು, ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದರು.

ಅಂತಾರಾಷ್ಟ್ರೀಯ ಚುಟಕು ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್‌ ಒಟ್ಟಾರೆ ಆರನೇ ಬಾರಿ ಡಕ್‌ಔಟ್‌ ಆಗಿದ್ದಾರೆ. ಆ ಮೂಲಕ ಕೆಎಲ್‌ ರಾಹುಲ್‌ ಅವನ್ನು ಹಿಂದಿಕ್ಕಿ ಅತಿ ಹೆಚ್ಚು ಡಕ್‌ಔಟ್‌ ಆದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಅನಗತ್ಯ ದಾಖಲೆ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.