Friday, 13th December 2024

IND vs SA: ಸತತ ಎರಡು ಟಿ20ಐ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

Sanju Samson becomes 1st Indian to hit back-to-back T20I hundreds

ಡರ್ಬನ್‌: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ (IND vs SA) ಸ್ಪೋಟಕ ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಶುಕ್ರವಾರ ಡರ್ಬನ್‌ನ ಕಿಂಗ್ಸ್‌ಮೀಡ್‌ ಸ್ಟೇಡಿಯಂನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌, ಮೊದಲನೇ ಎಸೆತದಿಂದಲೇ ಹೊಡಿ-ಬಡಿ ಆಟಕ್ಕೆ ಕೈ ಹಾಕಿದರು. ಇವರು 47 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ಸಿಡಿಸಿದ ಭಾರತದ ಮೊದಲನೇ ಹಾಗೂ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಕ್ಟೋಬರ್‌ 12 ರಂದು ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ಶತಕ 47 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿದ್ದರು. ಇದೀಗ 27 ದಿನಗಳ ಅಂತರದಲ್ಲಿ ಸಂಜು ಸ್ಯಾಮ್ಸನ್‌ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಡರ್ಬನ್‌ನಲ್ಲಿ ಸಂಜು ಸ್ಯಾಮ್ಸನ್‌ ಆಡಿದ 50 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು.

ಸೂರ್ಯಕುಮಾರ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಸಂಜು

ಭಾರತ ತಂಡದಲ್ಲಿ ಒಟ್ಟು 11 ಭಾರತೀಯ ಬ್ಯಾಟ್ಸ್‌ಮನ್‌ಗಳು ಟಿ20ಐ ಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಒಂದಕ್ಕಿಂತ ಹೆಚ್ಚಿನ ಶತಕಗಳನ್ನು ಸಿಡಿಸಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಸೂರ್ಯಕುಮಾರ್‌ ಯಾದವ್‌, ರೋಹಿತ್‌ ಶರ್ಮಾ ಹಾಗೂ ಕೆಎಲ್‌ ರಾಹುಲ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಇದೀಗ ಸಂಜು ಸೇರ್ಪಡೆಯಾಗಿದ್ದಾರೆ.

ಸತತ ಎರಡು ಟಿ20ಐ ಶತಕ ಸಿಡಿಸಿದ ಬ್ಯಾಟರ್ಸ್‌

ಗಸ್ಟವ್‌ ಮೆಕೆನ್‌ (ಫ್ರಾನ್ಸ್)‌
ರೈಲಿ ರೊಸೊವ್‌ (ದಕ್ಷಿಣ ಆಫ್ರಿಕಾ)
ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌)
ಸಂಜು ಸ್ಯಾಮ್ಸಾನ್‌ (ಭಾರತ)

ಎಂಎಸ್‌ ಧೋನಿ ದಾಖಲೆ ಮುರಿದ ಸಂಜು ಸ್ಯಾಮ್ಸನ್‌

ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 7000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಂಜು ಸ್ಯಾಮ್ಸನ್‌ ಅವರು ಮಾಜಿ ನಾಯಕ ಎಂಎಸ್‌ ಧೋನಿ (305 ಇನಿಂಗ್ಸ್‌ಗಳು) ಅವರನ್ನು ಹಿಂದಿಕ್ಕಿದ್ದಾರೆ. ಸಂಜು ಸ್ಯಾಮ್ಸನ್‌ ತಮ್ಮ 269ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್‌ ರಾಹುಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಇವರು 197ನೇ ಇನಿಂಗ್ಸ್‌ನಲ್ಲಿ ರಾಹುಲ್‌ 7000 ಟಿ20 ರನ್‌ಗಳನ್ನು ಪೂರ್ಣಗೊಳಿಸಿದ್ದರು.

ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 7000 ರನ್‌ ಪೂರ್ಣಗೊಳಿಸಿದವರು

ಕೆಎಲ್ ರಾಹುಲ್ – 197 ಇನಿಂಗ್ಸ್‌
ವಿರಾಟ್ ಕೊಹ್ಲಿ – 212 ಇನಿಂಗ್ಸ್‌
ಶಿಖರ್ ಧವನ್ – 246 ಇನಿಂಗ್ಸ್‌
ಸೂರ್ಯಕುಮಾರ್ ಯಾದವ್ – 249 ಇನಿಂಗ್ಸ್‌
ಸುರೇಶ್ ರೈನಾ – 251 ಇನಿಂಗ್ಸ್‌
ರೋಹಿತ್ ಶರ್ಮಾ – 258 ಇನಿಂಗ್ಸ್‌
ಸಂಜು ಸ್ಯಾಮ್ಸನ್ – 269 ಇನಿಂಗ್ಸ್‌
ರಾಬಿನ್ ಉತ್ತಪ್ಪ – 269 ಇನಿಂಗ್ಸ್‌
ಎಂಎಸ್ ಧೋನಿ – 305 ಇನಿಂಗ್ಸ್‌
ದಿನೇಶ್ ಕಾರ್ತಿಕ್ – 336 ಇನಿಂಗ್ಸ್‌

ಈ ಸುದ್ದಿಯನ್ನು ಓದಿ: IND vs SA: ಇಂದು ಮೊದಲ ಟಿ20; ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ