ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟಿ20ಐ (IND vs SA) ಸರಣಿಯಲ್ಲಿ ತಮ್ಮ ಸ್ಪಿನ್ ಕೈಚಳಕ ಮುಂದುವರಿಸಿರುವ ವರುಣ್ ಚಕ್ರವರ್ತಿ, ಬುಧವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. ಆ ಮೂಲಕ ಟಿ20ಐನಲ್ಲಿ ಭಾರತದ ಯಾವುದೇ ಬೌಲರ್‌ನಿಂದ ಸಾಧ್ಯವಾಗದ ದಾಖಲೆಯನ್ನು ಬರೆದಿದ್ದಾರೆ.
ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ, ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ನಂತರ ಟಿ20ಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎಂಬ ನೂತನ ದಾಖಲೆಯನ್ನು ಬರೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲೂ ಮೂರು ವಿಕೆಟ್ ಪಡೆದಿದ್ದ ವರುಣ್ ಚಕ್ರವರ್ತಿ, ಸೆಂಚುರಿಯನ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಮ್ ಹಾಗೂ ರೀಜಾ ಹೆಂಡ್ರಿಕ್ಸ್ ವಿಕೆಟ್ ಪಡೆಯುವ ಮೂಲಕ ಟಿ20ಐ ಸರಣಿಹಯೊಂದರಲ್ಲಿ10 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಆ ಮೂಲಕ ರವಿಚಂದ್ರನ್ ಅಶ್ವಿನ್ ಹಾಗೂ ರವಿ ಬಿಷ್ಣೋಯ್ ಜೋಡಿಯ ಜಂಟಿ ದಾಖಲೆಯನ್ನು ಮುರಿದಿದ್ದಾರೆ.
IND vs SA: ವರುಣ್ ಚಕ್ರವರ್ತಿ ಸ್ಪಿನ್ ಮ್ಯಾಜಿಕ್ ವ್ಯರ್ಥ, ಹರಿಣ ಪಡೆಗೆ ಒಲಿದ ಜಯ!
ಟಿ20ಐ ಏಕೈಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಸ್
10- ವರುಣ್ ಚಕ್ರವರ್ತಿ- ದಕ್ಷಿಣ ಆಫ್ರಿಕಾ ವಿರುದ್ಧ – 2024
- 9- ರವಿಚಂದ್ರನ್ ಅಶ್ವಿನ್- ಶ್ರೀಲಂಕಾ ವಿರುದ್ಧ-2016
- 9- ರವಿ ಬಿಷ್ಣೋಯ್- ಆಸ್ಟ್ರೇಲಿಯಾ-2023
- 8- ದೀಪಕ್ ಚಹರ್- ಬಾಂಗ್ಲಾದೇಶ ವಿರುದ್ಧ-2019
- 8- ಅಕ್ಷರ್ ಪಟೇಲ್- ಆಸ್ಟ್ರೇಲಿಯಾ ವಿರುದ್ಧ- 2022
ಸೆಂಚುರಿಯನ್ ಪಾರ್ಕ್‌ನಲ್ಲಿ ದುಬಾರಿಯಾದ ವರುಣ್ ಚಕ್ರವರ್ತಿ
ಡರ್ಬನ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಉತ್ತಮ ಬೌಲಿಂಗ್ ತೋರಿ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳಾದ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಸೇರಿದಂತೆ 4 ಓವರ್‌ಗಳಲ್ಲಿ 25 ರನ್ ನೀಡಿ ಮೂರು ವಿಕೆಟ್ ಪಡೆದು ತಂಡಕ್ಕೆ 61 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು. ಡರ್ಬನ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲೂ ಮಿಲ್ಲರ್, ಕ್ಲಾಸೆನ್, ಮಾರ್ಕ್ರಮ್ ಸೇರಿದಂತೆ ಐವರು ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಬೆಲೆಯಲ್ಲಿ ಬೀಳಿಸಿದ್ದರು ಹಾಗೂ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿದ್ದರು. ಆದರೆ, ಸೆಂಚುರಿಯನ್‌ನಲ್ಲಿ ನಡೆದಿದ್ದ ಹೈಸ್ಕೋರಿಂಗ್ ಪಂದ್ಯದಲ್ಲಿ ತಾವು ಮಾಡಿದ್ದ 4 ಓವರ್‌ಗಳಲ್ಲಿ 13.50ರ ಸರಾಸರಿಯಲ್ಲಿ 54 ರನ್ ನೀಡಿ ದುಬಾರಿ ಎನಿಸಿದರೂ ಪ್ರಮುಖ ಎರಡು ವಿಕೆಟ್ ಪಡೆದ ವರುಣ್ ಚಕ್ರವರ್ತಿ, ತಂಡ 11 ರನ್ ಗೆಲುವು ಸಾಧಿಸುವಲ್ಲಿ ನೆರವು ನೀಡಿದ್ದರು.
ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಮ್ ಇಂಡಿಯಾ
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ ಯಾದವ್ ಸಾರಥ್ಯದ ಟೀಮ್ ಇಂಡಿಯಾ, ನವೆಂಬರ್ 15 ( ಶುಕ್ರವಾರ) ರಂದು ನಡೆಯಲಿರುವ ಅಂತಿಮ ಹಾಗೂ ನಿರ್ಣಾಯಕ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಲು ಗಮನ ಹರಿಸಿದೆ. ಇನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.