Friday, 13th December 2024

ಮೂರನೇ ಟೆಸ್ಟ್‌: ಆಸೀಸ್‌ಗೆ 9 ವಿಕೆಟ್‌ಗಳ ಭರ್ಜರಿ ಗೆಲುವು

ಇಂದೋರ್‌: ನೇಥನ್‌ ಲಯಾನ್‌ ಅವರ ಸ್ಪಿನ್‌ ಬೌಲಿಂಗ್‌ ಸಹಾಯದಿಂದ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ಭಾರತ ವಿರುದ್ದ ಗೆಲುವು ಸಾದಿಸುವ ಮೂಲಕ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಕಾಂಗರೂ ಪಡೆ ಅಧಿಕೃತವಾಗಿ ಅರ್ಹತೆ ಪಡೆಯಿತು.

ಶುಕ್ರವಾರ 76 ರನ್ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಮೊದಲನೇ ಓವರ್‌ನಲ್ಲಿಯೇ ಉಸ್ಮಾನ್‌ ಖವಾಜ ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಆದರೆ, ಮಾರ್ನಸ್‌ ಲಾಬುಶೇನ್‌ (28*) ಹಾಗೂ ಟ್ರಾವಿಸ್‌ ಹೆಡ್‌ (49*) ಅವರ ಬ್ಯಾಟಿಂಗ್‌ ಸಹಾಯದಿಂದ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 18.5 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 78 ರನ್‌ ಗಳಿಸಿತು. ಮೂಲಕ ಭಾರತದ ನೆಲದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ಈ ಪಂದ್ಯ ಗೆದ್ದು ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಂಡಿದ್ದ ಭಾರತ ತಂಡಕ್ಕೆ ಈ ಸೋಲಿನೊಂದಿಗೆ ಭಾರಿ ಹಿನ್ನಡೆ ಯಾಯಿತು. ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತ ಅರ್ಹತೆ ಪಡೆಯಬೇಕೆಂದರೆ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ಗೆಲುವು ಪಡೆಯಲೇ ಬೇಕಾದ ಅನಿವಾರ್ಯತೆ ಇದೆ.

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೇಥನ್‌ ಲಯಾನ್‌ ಅವರಿಂದ ಕಠಿಣ ಸವಾಲು ಎದುರಾಯಿತು. ಪ್ರಥಮ ಇನಿಂಗ್ಸ್‌ ನಲ್ಲಿ ಮ್ಯಾಥ್ಯೂ ಕುಹ್ನೇಮನ್‌ (5 ವಿಕೆಟ್‌) ಜೊತೆಗೆ ನೇಥನ್‌ ಲಯಾನ್ 3 ವಿಕೆಟ್‌ ಕಿತ್ತಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಇಂದೋರ್‌ ಪರಿಸ್ಥಿತಿ ಗಳನ್ನು ಚೆನ್ನಾಗಿ ಅರಿತುಕೊಂಡ ಲಯಾನ್‌, ಬರೋಬ್ಬರಿ 8 ವಿಕೆಟ್‌ಗಳನ್ನು ಪಡದುಕೊಂಡರು. ಆ ಮೂಲಕ ಒಟ್ಟು 11 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.