ಚೆನ್ನೈ: ಗುರುವಾರದಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ(India Test History) ಗೆಲುವು ಸಾಧಿಸಿದರೆ ದಾಖಲೆಯೊಂದು ನಿರ್ಮಾಣವಾಗಲಿದೆ. ಭಾರತದ ಟೆಸ್ಟ್ ಗೆಲುವಿನ ಸಂಖ್ಯೆ ಸೋಲಿನ ಸಂಖ್ಯೆಗಿಂತ ಹೆಚ್ಚಾಗಲಿದೆ.
1932ರಲ್ಲಿ ಟೆಸ್ಟ್ ಮಾನ್ಯತೆ ಪಡೆದಂದಿನಿಂದಲೂ ಭಾರತದ ಸೋಲಿನ ಸಂಖ್ಯೆ ಗೆಲುವಿಗಿಂತ ಜಾಸ್ತಿಯೇ ಇದೆ. ಒಮ್ಮೆಯೂ ಗೆಲುವು ಸೋಲಿನ ಗಡಿಯನ್ನು ದಾಟಿಲ್ಲ. ಭಾರತ ಇದುವರೆಗೂ ಒಟ್ಟು 579 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ 178 ಸೋಲು ಮತ್ತು ಅಷ್ಟೇ ಸಂಖ್ಯೆಯ ಗೆಲುವು ಕೂಡ ಸಾಧಿಸಿದೆ. ಬಾಂಗ್ಲಾ ವಿರುದ್ಧ ಮೊದಲ ಪಂದ್ಯ ಗೆದ್ದರೆ ಮೊದಲ ಬಾರಿಗೆ ಸೋಲನ್ನು ಮೀರಿ ನಿಲ್ಲುವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.
ಮೊದಲ ಟೆಸ್ಟ್‌ನಲ್ಲಿಯೇ ಸೋಲು
ಭಾರತ ತಂಡ ಮೊತ್ತ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದು 1932ರಲ್ಲಿ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ವಿಶೇಷ ಎಂದರೆ ಭಾರತ ಮೊದಲ ಟೆಸ್ಟ್ ಪಂದ್ಯ ಗೆಲುವು ಸಾಧಿಸಿದ್ದೂ ಕೂಡ ಇಂಗ್ಲೆಂಡ್ ವಿರುದ್ಧವೇ. 1951/52 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1 ಗೆಲುವು ಸಾಧಿಸಿತ್ತು. ಸರಣಿ 1-1 ಅಂತರದಿಂದ ಡ್ರಾ ಗೊಂಡಿತ್ತು.
ಪಾಕ್ ವಿರುದ್ಧ ಮೊದಲ ಗೆಲುವು
ಭಾರತ ತಂಡ ಚೊಚ್ಚಲ ಟೆಸ್ಟ್ ಸರಣಿ ಗೆದ್ದಿದ್ದು ಬದ್ಧ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಎನ್ನುವುದು ವಿಶೇಷ. 1952/53 ರಲ್ಲಿ ತವರಿನಲ್ಲಿ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು.
ಭಾರತ-ಬಾಂಗ್ಲಾ ಟೆಸ್ಟ್ ಮುಖಾಮುಖಿ
ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಅಡಿದೆ. ಈ ಪೈಕಿ ಭಾರತ ಅಜೇಯ 11 ಗೆಲುವು ಸಾಧಿಸಿದೆ. 2 ಪಂದ್ಯ ಡ್ರಾ ಗೊಂಡಿದೆ. ಬಾಂಗ್ಲಾದೇಶ ಇದುವರೆಗೂ ಒಂದೇ ಒಂದು ಪಂದ್ಯ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಒಟ್ಟು ಇತ್ತಂಡಗಳು 8 ಟೆಸ್ಟ್ ಸರಣಿ ಆಡಿವೆ.
ಇದನ್ನೂ ಓದಿ IND vs BAN: ರದ್ದಾಗುವ ಭೀತಿಯಲ್ಲಿ ಭಾರತ-ಬಾಂಗ್ಲಾ ನಡುವಣ ಸರಣಿ; ಎಚ್ಚರಿಕೆ ನೀಡಿದ ಸಂಘಟನೆ
ಬಾಂಗ್ಲಾ ಟೆಸ್ಟ್ ತಂಡ
ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಾಕಿಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಾಸ್ ಮಹಮ್ಮದ್ ಸೈಯದ್ ಖಲೀದ್ ಅಹ್ಮದ್, ಜಾಕರ್ ಅಲಿ ಅನಿಕ್.
ಮೊದಲ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.