Saturday, 14th December 2024

ಏಷ್ಯನ್‌ ಕಪ್‌ ಫುಟ್‌ಬಾಲ್‌: ನಾಳೆ ಭಾರತಕ್ಕೆ ಅಫ್ಗಾನಿಸ್ತಾನದ ಸವಾಲು

ಕೋಲ್ಕತ್ತ: ಏಷ್ಯನ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಹಂತದ ಎರಡನೇ ಪಂದ್ಯದಲ್ಲಿ ಶನಿವಾರ ಭಾರತ ತಂಡ ಅಫ್ಗಾನಿಸ್ತಾನದ ಸವಾಲು ಎದರಿಸಲಿದೆ.

ಮೊದಲ ಪಂದ್ಯದಲ್ಲಿ ಕಾಂಬೊಡಿಯಾ ತಂಡವನ್ನು ಭಾರತ ಮಣಿಸಿತ್ತು. ನಾಯಕ ಸುನಿಲ್‌ ಚೆಟ್ರಿ ಕಾಂಬೊಡಿಯಾ ವಿರುದ್ಧ ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದ್ದರು.

ಭಾರತ- ಆಫ್ಗಾನಿಸ್ತಾನ ಇದುವರೆಗೆ 10 ಸಲ ಎದುರಾಗಿದ್ದು, ಆರರಲ್ಲಿ ಭಾರತ ಗೆದ್ದಿದೆ. ಅಫ್ಗಾನಿಸ್ತಾನ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇತರ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. 2016ರ ನಂತರ ಉಭಯ ತಂಡಗಳು ವಿಶ್ವಕಪ್‌ ಟೂರ್ನಿಯ ಅರ್ಹತಾ ಪಂದ್ಯಗಳಲ್ಲಿ ಎರಡು ಸಲ ಎದುರಾಗಿವೆ. ಎರಡೂ ಪಂದ್ಯಗಳು 1-1 ಡ್ರಾದಲ್ಲಿ ಕೊನೆ ಗೊಂಡಿತ್ತು.

ಗೆಲುವು ಲಭಿಸಬೇಕಾದರೆ ಚೆಟ್ರಿ ಮಾತ್ರವಲ್ಲದೆ, ಸ್ಟ್ರೈಕರ್‌ಗಳಾದ ಲಿಸ್ಟನ್‌ ಕೊಲಾಸೊ, ಮನ್ವೀರ್‌ ಸಿಂಗ್, ಉದಾಂತ ಸಿಂಗ್, ಆಶಿಕ್ ಕುರುನಿಯನ್‌ ಮತ್ತು ರೋಶನ್‌ ಸಿಂಗ್‌ ಅವರೂ ಪೂರ್ಣ ಸಾಮರ್ಥ್ಯದೊಂದಿಗೆ ಆಡುವುದು ಅನಿವಾರ್ಯ.

ಭಾರತ ತಂಡ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಹಾಂಕಾಂಗ್‌ನ ಸವಾಲು ಎದುರಿಸಲಿದೆ. ಅಫ್ಗನ್‌ ತನ್ನ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ ಎದುರು 1-2 ಗೋಲುಗಳ ಸೋಲು ಅನುಭವಿಸಿತ್ತು