Friday, 13th December 2024

ಟಿ20 ಪಂದ್ಯದಲ್ಲಿ ಭಾರತ ತಂಡ ಜಯಭೇರಿ

ವಿಶಾಖಪಟ್ಟಣ: ಟಿ20 ಪಂದ್ಯದಲ್ಲಿ ಭಾರತ ತಂಡವು ಜಯಭೇರಿ ಬಾರಿಸಿತು. ಆಸ್ಟ್ರೇಲಿಯಾ ಸೋತಿತು.

ಗುರುವಾರ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 209 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಇಶಾನ್ ಕಿಶನ್ (58; 39ಎ) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (80; 42ಎ) ಅವರ ಬೀಸಾಟದ ಬಲದಿಂದ 2 ವಿಕೆಟ್‌ಗಳಿಂದ ಜಯಿಸಿತು.

ತಂಡದ ಗೆಲುವಿಗೆ 15 ಎಸೆತಗಳಲ್ಲಿ 15 ರನ್‌ಗಳು ಬೇಕಿದ್ದ ಸಂದರ್ಭದಲ್ಲಿ ಸೂರ್ಯಕುಮಾರ್ ಅವರು ಬೆಹ್ರೆನ್‌ಡಾರ್ಫ್ ಎಸೆತ ವನ್ನು ಸಿಕ್ಸ್‌ಗೆ ಎತ್ತಲು ಹೋಗಿ ಆಯರನ್ ಹಾರ್ಡಿಗೆ ಕ್ಯಾಚಿತ್ತರು. ಈ ಹಂತದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್ ಮಾಡಿದ ತಂತ್ರಗಾರಿಕೆ ಗಮನ ಸೆಳೆದವು. ಬೌಲರ್‌ಗಳು ಬಿಗಿ ದಾಳಿ ನಡೆಸಲು ಯತ್ನಿಸಿದರು. ಕ್ಷೇತ್ರ ರಕ್ಷಕರು ಚುರುಕಾಗಿ ಆಡಿದರು.

ಇದರ ಫಲವಾಗಿ ಕೇವಲ 13 ರನ್‌ಗಳ ಅಂತರದಲ್ಲಿ ಭಾರತದ ನಾಲ್ಕು ವಿಕೆಟ್‌ಗಳು ಪತನವಾದವು. ಅದರಲ್ಲೂ ಕೊನೆಯ ಓವರ್‌ನಲ್ಲಿ ಏಳು ರನ್‌ಗಳ ಅಗತ್ಯವಿತ್ತು. ವೇಗಿ ಸೀನ್ ಅಬಾಟ್ ಹಾಕಿದ ಓವರ್‌ನಲ್ಲಿಯೇ ಮೂವರು ಬ್ಯಾಟರ್‌ಗಳು ಔಟಾದರು. ಅಕ್ಷರ್ ಪಟೇಲ್ ಅವರ ಕ್ಯಾಚ್‌ ಅನ್ನು ಅಬಾಟ್ ಅವರೇ ಪಡೆದರೆ, ರವಿ ಬಿಷ್ಣೋಯಿ ಮತ್ತು ಆರ್ಷದೀಪ್ ಸಿಂಗ್ ರನ್‌ಔಟ್ ಆದರು.

ಇದರಿಂದಾಗಿ ಕೊನೆಯ ಒಂದು ಎಸೆತದಲ್ಲಿ ಒಂದು ರನ್‌ ಮಾತ್ರ ಬೇಕಿತ್ತು. ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್ ಚೆಂಡನ್ನು ಲಾಂಗ್‌ ಆನ್‌ ಗೆರೆಯನ್ನು ದಾಟಿಸುವಲ್ಲಿ ಯಶಸ್ವಿಯಾದರು. ಆದರೆ ಅಬಾಟ್ ಓವರ್‌ಸ್ಟೆಪ್ ಮಾಡಿದ್ದರಿಂದ ನೋಬಾಲ್ ಆಗಿತ್ತು. ನಿಯಮದ ಪ್ರಕಾರ ಇದನ್ನು ಒಂದು ರನ್ ಎಂದು ಪರಿಗಣಿಸಲಾಯಿತು.

ಭಾರತ ಇಲ್ಲಿ ಗೆಲುವಿನ ಸಂಭ್ರಮ ಆಚರಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಇಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 50 ಎಸೆತಗಳಲ್ಲಿ 110 ರನ್ ಗಳಿಸಿದ ಜೋಶ್ ಇಂಗ್ಲಿಸ್ ಬಲದಿಂದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಚುಟುಕು ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ಎದುರು ದಾಖಲಿಸಿದ ಗರಿಷ್ಠ ಮೊತ್ತ ಇದು. ಜೋಶ್ ಅವರಿಗೂ ಇದು ಚೊಚ್ಚಲ ಶತಕ.

ಇನಿಂಗ್ಸ್ ಆರಂಭಿಸಿದ ಸ್ಟೀವನ್ ಸ್ಮಿತ್ (52; 41ಎ) ಮತ್ತು ಮ್ಯಾಥ್ಯೂ ಶಾರ್ಟ್ (13 ರನ್) ಉತ್ತಮ ಅಡಿಪಾಯ ಹಾಕುವ ಪ್ರಯತ್ನ ಮಾಡಿದರು. ಐದನೇ ಓವರ್‌ನಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ ಎಸೆತದಲ್ಲಿ ಶಾರ್ಟ್ ಕ್ಲೀನ್ ಬೌಲ್ಡ್ ಆದರು. ಅದೇ ಓವರ್‌ನಲ್ಲಿ ಸ್ಮಿತ್ ನೇರಕ್ಕೆ ಹೊಡೆದಿದ್ದ ಚೆಂಡನ್ನು ಕ್ಯಾಚ್ ಮಾಡುವ ರವಿ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಕ್ರೀಸ್‌ಗೆ ಬಂದ 28 ವರ್ಷದ ಬಲಗೈ ಬ್ಯಾಟರ್ ಜೋಶ್ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ನಂತರದ 18 ಎಸೆತಗಳಲ್ಲಿ ಶತಕದ ಗಡಿಯನ್ನೂ ದಾಟಿದರು.

ಅವರು ಸ್ಮಿತ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 66 ಎಸೆತಗಳಲ್ಲಿ 130 ರನ್‌ ಸೇರಿಸಿದರು. ಅದರಲ್ಲಿ ಸ್ಮಿತ್ ಪಾಲು 36 ರನ್‌ಗಳು ಮಾತ್ರ. ಉಳಿದದ್ದು ಜೋಶ್ ಅವರ ಕಾಣಿಕೆ. ಭಾರತದ ಬೌಲರ್‌ಗಳು ದುಬಾರಿಯಾದರು.