Friday, 13th December 2024

IOA Treasurer: ಒಲಿಂಪಿಕ್‌ ಸಂಸ್ಥೆ ಖಜಾಂಚಿಗೆ ಶೋಕಾಸ್‌ ನೋಟಿಸ್‌

IOA Treasurer

ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಖಜಾಂಚಿ(IOA Treasurer) ಸಹದೇವ್ ಯಾದವ್(Sahdev Yadav) ಅವರಿಗೆ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ(IOA chief PT Usha) ಅವರು ಶೋಕಾಸ್‌ ನೋಟಿಸ್‌ ಜಾರಿಮಾಡಿದ್ದಾರೆ. ಸೆ. 10ರಂದು ನೋಟಿಸ್‌ ಜಾರಿಗೊಳಿಸಿದ್ದು, ಇದೇ 24ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಸಹದೇವ್ ಅವರ ಆಯ್ಕೆಯು ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘಿಸಿದೆ ಎಂಬ ದೂರುಗಳನ್ನು ಅನುಸರಿಸಿ ಅವರು ಈ ಕ್ರಮ ಕೈಗೊಂಡಿದ್ದಾರೆ.

‘ಕಳೆದ ಚುನಾವಣೆಯಲ್ಲಿ ಖಜಾಂಚಿ ಹುದ್ದೆಗೆ ನಿಮಗಿರುವ ಅರ್ಹತೆಯನ್ನು ಪ್ರಶ್ನಿಸಿ ಭಾರತ ಒಲಿಂಪಿಕ್‌ ಸಂಸ್ಥೆಗೆ ಇತ್ತೀಚೆಗೆ ಅಧಿಕೃತವಾಗಿ ದೂರು ಸಲ್ಲಿಸಿರುವುದನ್ನು ಗಮನಕ್ಕೆ ತರಲು ಈ ಪತ್ರ ನೀಡಲಾಗಿದೆ. ದೂರುದಾರರು, ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಸ್ತಾಪಿಸಿದ್ದು, ಅದು ಖಜಾಂಚಿ ಹುದ್ದೆಗೆ ಸ್ಪರ್ಧಿಸಲು ನಿಮಗಿರುವ ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ’ಎಂದು ಉಷಾ ನೋಟಿಸ್‌ನಲ್ಲಿ ಬರೆದಿದ್ದಾರೆ.

ಕ್ರೀಡಾಸಂಹಿತೆ ನಿಗದಿಪಡಿಸಿರುವ ವಯಸ್ಸು ಮತ್ತು ಅವಧಿಯನ್ನು ಮೀರಿ ಯಾದವ್‌ ಮತ್ತು ಕೆಲವು ಅಧಿಕಾರಿಗಳು ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸತತ 12 ವರ್ಷಗಳ ಅಧಿಕಾರದ ನಂತರ ಪದಾಧಿಕಾರಿಯು ಆ ಹುದ್ದೆಯಿಂದ ಕೆಳಗಿಳಿಯುವುದು ಕಡ್ಡಾಯ ಎಂದು ಸಂಹಿತೆ ಹೇಳುತ್ತದೆ. ಉಷಾ ಅವರು ನಾರಂಗ್ ಅವರನ್ನು ವಜಾಗೊಳಿಸಿದ ಪತ್ರ ಸ್ವೀಕರಿಸಿದ್ದರೂ, ಅದು ಕಾನೂನುಬಾಹಿರವಾಗಿದೆ ಎಂದು ತಿರಸ್ಕರಿಸಿದ್ದರು.

ಇದನ್ನೂ ಓದಿ Vinesh Phogat : ವಿನೇಶ್ ರಾಜಕೀಯ ಮಾಡುವುದಕ್ಕಿಂತ ಕುಸ್ತಿ ಕಡೆಗೆ ಗಮನ ಕೊಡಬೇಕಿತ್ತು ಎಂದ ಚಿಕ್ಕಪ್ಪ

ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿನೇಶ್‌

ಹರಿಯಾಣ ವಿಧಾನಸಭೆ(Haryana polls) ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕೆಲ ದಿನಗಳ ಹಿಂದೆ ಪಿ.ಟಿ. ಉಷಾ(PT Usha) ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಒಲಿಂಪಿಕ್ಸ್‌ ವೇಳೆ ನಾನು(ವಿನೇಶ್‌) ನಿರ್ಜಲೀಕರಣದಿಂದ ಆಸ್ಪತ್ರೆ ಸೇರಿದ್ದಾಗ ಪಿಟಿ ಉಷಾ ಅವರು ಆರೋಗ್ಯ ವಿಚಾರಿಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ರಾಜಕೀಯ ಉದ್ದೇಶಕ್ಕೋಸ್ಕರ ತೆಗೆದ ಫೋಟೊ ಎಂದು ವಿನೇಶ್‌ ಹೇಳಿದ್ದರು.

“ನನಗೆ ಪ್ಯಾರಿಸ್‌ನಲ್ಲಿ ಯಾವ ಬೆಂಬಲ ಸಿಕ್ಕಿದೆ ಎಂದು ನನಗೆ ತಿಳಿದಿಲ್ಲ. ಪಿಟಿ ಉಷಾ ಮೇಡಂ ನನ್ನನ್ನು ಅಂದು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಒಂದು ಫೋಟೋ ಕ್ಲಿಕ್ಕಿಸಲಾಯಿತು. ಈ ಫೋಟೊವನ್ನು ಉಷಾ ಮೇಡಂ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಫೋಟೊದ ಹಿಂದೆ ರಾಜಕೀಯ ನಟನೆ ಇತ್ತು” ಎಂದು ವಿನೇಶ್‌ ಆರೋಪ ಮಾಡಿದ್ದರು.