Saturday, 30th November 2024

IPL 2025: ಮುಂಬೈ ಇಂಡಿಯನ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಇಶಾನ್‌ ಕಿಶನ್‌!

IPL 2025: ʻSo many memories with all of youʼ-Ishan Kishan Special Message to Mumbai Indians

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ಭಾರತದ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಮುಂಬರುವ 2025 ರ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಮೆಗಾ ಹರಾಜಿನಲ್ಲಿ ಇಶಾನ್‌ ಕಿಶನ್‌ ಅವರನ್ನು ಹೈದರಾಬಾದ್‌ ಫ್ರಾಂಚೈಸಿ 11.25 ಕೋಟಿ ರೂ. ಗಳಿಗೆ ಖರೀದಿಸಿತ್ತು. ಮೆಗಾ ಹರಾಜಿನಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಅನ್ನು ಖರೀದಿಸಲು ಮುಂಬೈ ಫ್ರಾಂಚೈಸಿ ಕೂಡ ಪ್ರಯತ್ನಿಸಿತ್ತಾದರೂ ಅವರಿಗೆ ದೊಡ್ಡ ಮೊತ್ತವನ್ನು ನೀಡಲು ಆಸಕ್ತಿ ತೋರಿರಲಿಲ್ಲ. ಮುಂಬೈ ತಂಡ ಇಶಾನ್‌ ಕಿಶನ್‌ಗೆ 3.20 ಕೋಟಿ ರೂ. ತನಕ ಬಿಡ್‌ ಮಾಡಿ ಸುಮ್ಮನಾಗಿತ್ತು.

2016 ರಲ್ಲಿ ಗುಜರಾತ್‌ ಲಯನ್ಸ್‌ ಪರ ಐಪಿಎಲ್‌ ವೃತ್ತಿ ಜೀವನವನ್ನು ಆರಂಭಿಸಿದ್ದ ಇಶಾನ್‌ ಕಿಶನ್‌, 7 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ಪರ ತಮ್ಮ ವೃತ್ತಿ ಜೀವನವನ್ನು ಸವೆಸಿದ್ದರು ಹಾಗೂ ಮುಂಬೈನಲ್ಲಿ ತೋರಿದ ಪ್ರದರ್ಶನದಿಂದಲೇ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ಇದೀಗ ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಲು ಸಜ್ಜಾಗುತ್ತಿದ್ದಾರೆ.

IPL 2025: ಅನ್‌ಸೋಲ್ಡ್‌ ಆಟಗಾರರು ಕೂಡ ಐಪಿಎಲ್ ಆಡಬಹುದು! ಹೇಗೆ ಗೊತ್ತೆ?

ಮುಂಬೈ ಇಂಡಿಯನ್ಸ್‌ಗೆ ಇಶಾನ್‌ ಕಿಶನ್‌ ಭಾವನಾತ್ಮಕ ಸಂದೇಶ

ಅಂದ ಹಾಗೆ ಇಶಾನ್‌ ಕಿಶನ್‌ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

“ಸಂತೋಷದೊಂದಿಗೆ ಬೆಳೆಯುವುದರ ಜೊತೆಗೆ, ಸಾಕಷ್ಟು ಆನಂದದ ಕ್ಷಣಗಳು ಸೇರಿದಂತೆ ಸಾಕಷ್ಟು ನೆನಪುಗಳನ್ನು ನಿಮ್ಮೊಂದಿಗೆ ಇವೆ. ಎಂಐ, ಮುಂಬೈ ಹಾಗೂ ದಿ ಪಲ್ಟಾನ್‌ ಯಾವಾಗಲೂ ನನ್ನ ಹೃದಯದಲ್ಲಿರಲಿದೆ. ಒಬ್ಬ ವ್ಯಕ್ತಿಯಾಗಿ ಹಾಗೂ ಆಟಗಾರನಾಗಿ ಈ ತಂಡದಲ್ಲಿ ಬೆಳೆದಿದ್ದೇನೆ. ನಾನು ನಮ್ಮ ನೆನಪುಗಳೊಂದಿಗೆ ಮುಂಬೈ ಇಂಡಿಯನ್ಸ್‌ಗೆ ವಿದಾಯ ಹೇಳುತ್ತಿದ್ದೇನೆ ಹಾಗೂ ನೆನಪುಗಳು ನನ್ನ ಜೀವನದಲ್ಲಿ ಸದಾ ಇರಲಿದೆ. ಟೀಮ್‌ ಮ್ಯಾನೇಜ್‌ಮೆಂಟ್‌, ಕೋಚ್‌ಗಳು, ನನಗೆ ಸಾಕಷ್ಟು ನೆನಪುಗಳು ನೀಡಿರುವ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು,” ಎಂದು ಇಶಾನ್‌ ಕಿಶನ್‌ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

2018ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಎಂಟ್ರಿ

2018ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡ, 6.2 ಕೋಟಿ ರೂ. ಗಳಿಗೆ ಇಶಾನ್‌ ಕಿಶನ್‌ ಅವರನ್ನು ಖರೀದಿಸಿತ್ತು. 2019 ಮತ್ತು 2020ರ ಐಪಿಎಲ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಇಶಾನ್‌ ಕಿಶನ್‌ ಆಡಿದ್ದರು. 2020ರ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಫಲವಾಗಿ ಇಶಾನ್‌ ಕಿಶನ್‌ 2021ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಆಡಿದ ಬಳಿಕ ಅವರು, 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಿದ್ದರು.

ಇಶಾನ್‌ ಕಿಶನ್‌ ಅಂಕಿಅಂಶಗಳು

2022ರ ಮೆಗಾ ಹರಾಜಿನಲ್ಲಿಯೂ ಕಿಶಾನ್‌ ಕಿಶನ್‌ ಅವರನ್ನು ಮುಂಬೈ ಇಂಡಿಯನ್ಸ್‌ 15.25 ಕೋಟಿ ರೂ. ಗಳಿಗೆ ಉಳಿಸಿಕೊಂಡಿತ್ತು. 2022ರಿಂದ 2024ರ ತನಕ ಐದು ಬಾರಿ ಚಾಂಪಿಯನ್ಸ್‌ ಪರ ಇಶಾನ್‌ ಕಿಶನ್‌ ಅವರು 89 ಪಂದ್ಯಗಳನ್ನು ಆಡಿದ್ದು, 2325 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 15 ಅರ್ಧಶತಕಗಳನ್ನು ಸಿಡಿಸಿದ್ದಾರೆ.