Friday, 13th December 2024

IPL 2025: ʻರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ವಿರಾಟ್‌ ಕೊಹ್ಲಿಯೇ ನಾಯಕʼ-ಎಬಿ ಡಿವಿಲಿಯರ್ಸ್!

IPL 2025:‌ Ab de Villiers Makes Big Reveal After Mega Auction, Confirms RCB's New Captain For IPL 2025

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (IPL 2025) ಟೂರ್ನಿಯಲ್ಲಿ ಹಲವು ಫ್ರಾಂಚೈಸಿಗಳು ನೂತನ ನಾಯಕರೊಂದಿಗೆ ಕಣಕ್ಕೆ ಇಳಿಯಲಿವೆ. ಅದೇ ರೀತಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡ ಹೊಸ ನಾಯಕನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಸ್ಪರ್ಧೆಗೆ ಬರಲಿದೆ. ಆದರೆ, ಆರ್‌ಸಿಬಿ ತಂಡಕ್ಕೆ ಈ ಬಾರಿ ಯಾರು ನಾಯಕರಾಗಬಹುದೆಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಅದರಂತೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌, ಆರ್‌ಸಿಬಿ ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ್ದಾರೆ.

2022ರ ಐಪಿಎಲ್‌ ಮೆಗಾ ಹರಾಜಿನ ಮೂಲಕ ಆರ್‌ಸಿಬಿಗೆ ಬಂದಿದ್ದ ಫಾಫ್‌ ಡು ಪ್ಲೆಸಿಸ್‌ ಅವರು ಬೆಂಗಳೂರು ತಂಡವನ್ನು ಮೂರು ಆವೃತ್ತಿಗಳಲ್ಲಿ ಮುನ್ನಡೆಸಿದ್ದರು. ಆದರೆ 2025ರ ಐಪಿಎಲ್‌ ಆಟಗಾರರ ಮೆಗಾ ಹರಾಜಿಗೆ ಫಾಫ್‌ ಡು ಪ್ಲೆಸಿಸ್‌ ಅವರನ್ನು ರಿಲೀಸ್‌ ಮಾಡಲಾಗಿತ್ತು. ಆದರೆ, ಮೆಗಾ ಹರಾಜಿನಲ್ಲಿ ಫಾಫ್‌ ಅವರನ್ನು ಆರ್‌ಟಿಎಂ ಮೂಲಕ ಉಳಿಸಿಕೊಳ್ಳುವ ಅವಕಾಶವಿತ್ತು. ಆದರೆ, ಬೆಂಗಳೂರು ಫ್ರಾಂಚೈಸಿ ಇದನ್ನು ನಿರಾಕರಿಸಿತು. ಇದರ ಲಾಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌, ಡು ಪ್ಲೆಸಿಸ್‌ ಅವರನ್ನು ಮೂಲ ಬೆಲೆ ಎರಡು ಕೋಟಿ ರೂ. ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.

ಅಲ್ಲದೆ ನಾಯಕನ ಹುಡುಕಾಟದಲ್ಲಿದ್ದ ಬೆಂಗಳೂರು ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಅಥವಾ ಕೆಎಲ್‌ ರಾಹುಲ್‌ ಅವರಲ್ಲಿ ಒಬ್ಬರನ್ನು ಖರೀದಿಸಬಹುದು ಹಾಗೂ ನಾಯಕತ್ವ ನೀಡಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಈ ಮೂವರು ಆಟಗಾರರನ್ನು ಖರೀದಿಸುವಲ್ಲಿ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಆರ್‌ಸಿಬಿಗೆ ವಿರಾಟ್‌ ಕೊಹ್ಲಿ ನಾಯಕನಾಗಿ ಮರಳಬಹುದೆಂಬ ಅನುಮಾನ ಎಲ್ಲರಿಗೂ ಮೂಡಿದೆ. ಅದೇ ರೀತಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಅವರು ಕೂಡ ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ಮರಳಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಆರ್‌ಸಿಬಿಗೆ ನಾಯಕನನ್ನು ಖಚಿತಪಡಿಸಿದ ಎಬಿಡಿ

ಆರ್‌ಸಿಬಿಗೆ ವಿರಾಟ್‌ ಕೊಹ್ಲಿ ನಾಯಕರಾಗಲಿದ್ದಾರೆಂಬ ಬಗ್ಗೆ ವದಂತಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವದಂತಿಗಳನ್ನು ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಖಚಿತಪಡಿಸಿದ್ದಾರೆ. ಮೂರು ಆವೃತ್ತಿಗಳ ಬಳಿಕ ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮರಳಲಿದ್ದಾರೆಂದು ಎಬಿ ಡಿ ಭವಿಷ್ಯ ನುಡಿದಿದ್ದಾರೆ. 2013 ರಿಂದ 2021ರ ವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದರು. 2023ರ ಐಪಿಎಲ್‌ ಟೂರ್ನಿಯಲ್ಲಿ ಫಾಫ್‌ ಗಾಯಕ್ಕೆ ತುತ್ತಾಗಿದ್ದ ವೇಳೆ ವಿರಾಟ್‌ ಕೊಹ್ಲಿ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿತ್ತು.

ವಿರಾಟ್‌ ಕೊಹ್ಲಿ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಐಪಿಎಲ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವದಿಂದಲೂ ಇಳಿದಿದ್ದರು.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್‌, “ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಭಾವಿಸುತ್ತೇನೆ. ಆದರೆ, ತಂಡದ ಸಂಯೋಜನೆ ನೋಡಿದರೆ ವಿರಾಟ್‌ ಕೊಹ್ಲಿಯೇ ನಾಯಕ ಎಂಬುದು ಖಚಿತವಾಗುತ್ತಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ನಾಯಕನಾಗಿ ಕೊಹ್ಲಿ ಅಂಕಿಅಂಶಗಳು

ವಿರಾಟ್‌ ಕೊಹ್ಲಿ ಒಟ್ಟಾರೆ 143 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ ಹಾಗೂ ಇದರಲ್ಲಿ 66ರಲ್ಲಿ ಗೆಲುವು ಪಡೆದಿದ್ದಾರೆ ಹಾಗೂ 70 ರಲ್ಲಿ ಸೋಲು ಅನುಭವಿಸಿದೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುವ ಮೂಲಕ ವಿರಾಟ್‌ ಕೊಹ್ಲಿ 18 ಆವೃತ್ತಿಗಳನ್ನು ಮುಗಿಸಿದ ಏಕೈಕ ಆಟಗಾರ ಎನಿಸಿಕೊಳ್ಳಲಿದ್ದಾರೆ.