Saturday, 23rd November 2024

IPL 2025: ಮೆಗಾ ಹರಾಜಿಗೂ ಮುನ್ನ ನಿರಾಶೆ ಮೂಡಿಸಿದ ಅರ್ಜುನ್‌ ತೆಂಡೂಲ್ಕರ್‌!

Arjun Tendulkar Failed Miserably In Syed Mushtaq Ali Trophy Day Before Mega Auction

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಆರಂಭವಾಗುತ್ತಿದ್ದಂತೆಯೇ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಿ ಟಿ20 ಟೂರ್ನಿಯ ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರು ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯಬಹುದು. ಆದರೆ, ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರು ತನ್ನ ಆರಂಭಿಕ ಪಂದ್ಯದಲ್ಲಿ ಎಡವಿ ಹಿನ್ನಡೆ ಅನುಭವಿಸಿದ್ದಾರೆ.

ಶನಿವಾರ ಮುಂಬೈ ವಿರುದ್ಧ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಗೋವಾ ತಂಡದ ಅರ್ಜುನ್ ತೆಂಡೂಲ್ಕರ್ ಬೌಲಿಂಗ್‌ನಲ್ಲಿ ಅತ್ಯಂತ ದುಬಾರಿಯಾಗಿದ್ದಾರೆ. ತಾನು ಬೌಲ್‌ ಮಾಡಿದ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ 12ರ ಎಕಾನಮಿ ರೇಟ್‌ನಲ್ಲಿ 48 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಇವರಿಂದ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಅರ್ಜುನ್ ಹೀನಾಯ ವೈಫಲ್ಯ ಅನುಭವಿಸಿದರು. ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಕೇವಲ 9 ರನ್‌ ಗಳಿಸಲಷ್ಟೇ ಶಕ್ತರಾದರು.

IPL 2025: ಆರ್‌ಸಿಬಿಗೆ ಓಂಕಾರ್ ಸಾಲ್ವಿ ಬೌಲಿಂಗ್‌ ಕೋಚ್‌

ಮುಂಬೈ ಇಂಡಿಯನ್ಸ್‌ನಿಂದ ರಿಲೀಸ್‌ ಆಗಿದ್ದ ಅರ್ಜುನ್

2024ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಆಡಿದ್ದರು. ಆದರೆ, ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಫ್ರಾಂಚೈಸಿ ಮೆಗಾ ಹರಾಜಿಗೆ ರಿಲೀಸ್‌ ಮಾಡಿತ್ತು. ಅರ್ಜುನ್ ತೆಂಡೂಲ್ಕರ್‌ ಅವರ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೂ ಮುನ್ನ ರಣಜಿ ಟ್ರೋಫಿಯಲ್ಲಿ ಅರ್ಜುನ್ ಅಮೋಘ ಪ್ರದರ್ಶನ ನೀಡಿದ್ದರು, ಆದರೆ ಹರಾಜಿಗೆ ಒಂದು ದಿನ ಮೊದಲು ಅರ್ಜುನ್ ಟಿ20 ಮಾದರಿಯಲ್ಲಿ ವಿಶೇಷ ಪ್ರದರ್ಶನ ತೋರಿಸಲು ಸಾಧ್ಯವಾಗಲಿಲ್ಲ.

ಮುಂಬೈ ವಿರುದ್ಧ ಗೋವಾಗೆ 26 ರನ್‌ ಸೋಲು

ಇನ್ನು ಗೋವಾ ವಿರುದ್ಧದ ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 130 ರನ್‌ಗಳ ನೆರವಿನಿಂದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 250 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗೋವಾ ತಂಡ ಕೂಡ ಮುಂಬೈಗೆ ಕಠಿಣ ಹೋರಾಟ ನೀಡಲು ಯತ್ನಿಸಿತು, ಆದರೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 224 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಮುಂಬೈ ತಂಡವು 26 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

IPL 2025 Mega Auction: ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿ ಪ್ರಕಟ

ಮೆಗಾ ಹರಾಜು ಯಾವಾಗ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೆಗಾ ಹರಾಜು ನವೆಂಬರ್‌ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. 550ಕ್ಕೂ ಅಧಿಕ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆ ಒಳಗಾಗಲಿದ್ದಾರೆ. ಅಂದ ಹಾಗೆ ಹರಾಜಿನ ಮೊದಲೆರಡು ಸೆಟ್‌ಗಳಲ್ಲಿ ಕೆಎಲ್‌ ರಾಹುಲ್‌, ಜೋಸ್‌ ಬಟ್ಲರ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಸೇರಿದಂತೆ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.