Tuesday, 10th December 2024

IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು?

ಮುಂಬಯಿ: ವಿಶ್ವದ ಕ್ಯಾಶ್‌ ರಿಚ್‌ ಕ್ರಿಕೆಟ್‌ ಲೀಗ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ(IPL 2025 Auction) ಆಟಗಾರರ ಹರಾಜು ಪ್ರಕ್ರಿಯೆ ಸೌದಿ ಅರೇಬಿಯದ ರಿಯಾದ್‌ನಲ್ಲಿ(IPL 2025 auction Riyadh) ನವೆಂಬರ್ 24 ಮತ್ತು 25ರಂದು ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವೇಳಾಪಟ್ಟಿಯ ಬಗ್ಗೆ ಐಪಿಎಲ್ ಫ್ರಾಂಚೈಸಿಗಳಿಗೆ ಅನೌಪಚಾರಿಕವಾಗಿ ತಿಳಿಸಲಾಗಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

ರಿಟೇನ್​ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್​ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಡಿಸೆಂಬರ್​ 1ರಂದು ಐಸಿಸಿಯ ಹೊಸ ಅಧ್ಯಕ್ಷರಾಗಿ​ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುನ್ನ ನವೆಂಬರ್​ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಮತ್ತು ಐಪಿಎಲ್‌ ಆಡಳಿತ ಮಂಡಳಿಯ ಯೋಜನೆಯಾಗಿದೆ.

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ 79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.

ಇದನ್ನೂ ಓದಿ IPL 2025: ಡೆಲ್ಲಿಗೆ ಬದಾನಿ ಮುಖ್ಯ ಕೋಚ್‌

ಹೊಸ ನಿಯಮದನ್ವಯ ಪ್ರಕಾರ ಉದಾಹರಣೆಗೆ ಹರಾಜಿನಲ್ಲಿ ʼಎʼ ತಂಡವೊಂದು ಆಟಗಾರನೊಬ್ಬನಿಗೆ 6 ಕೋಟಿ ರೂ. ಬಿಡ್​ ಸಲ್ಲಿಸಿದಾಗ, ʼಬಿʼ ತಂಡ ಆರ್​ಟಿಎಂ ಬಳಸಿ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾದರೆ, ʼಎʼ ತಂಡಕ್ಕೆ ಬಿಡ್​ ಮೊತ್ತ ಏರಿಸುವ ಅವಕಾಶ ನೀಡಲಾಗುತ್ತದೆ. ಆಗ ʼಎʼ ತಂಡ 12 ಕೋಟಿ ರೂ. ಬಿಡ್​ ಸಲ್ಲಿಸಿದರೆ, ʼಬಿʼ ತಂಡ ಆರ್​ಟಿಎಂನಲ್ಲಿ ಆ ಮೊತ್ತಕ್ಕೇ ಆಟಗಾರನನ್ನು ಮರಳಿ ಗಳಿಸಬಹುದಾಗಿರುತ್ತದೆ. ʼಎʼ ತಂಡ ಎಷ್ಟೇ ಮೊತ್ತದ ಬಿಡ್​ ಏರಿಕೆಯ ಮೂಲಕ ಆಟಗಾರನನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬಹುದು.

ಆಟಗಾರನಿಗೆ ಎಷ್ಟು ದುಡ್ಡು ಕೊಡಬೇಕು ಎನ್ನುವುದನ್ನು ಫ್ರಾಂಚೈಸಿಗಳು ನಿರ್ಧರಿಸಬಹುದಾಗಿದ್ದು, ಒಂದು ವೇಳೆ ನಿಗದಿತ 79 ಕೋಟಿಗಿಂತ ಹೆಚ್ಚು ಮೊತ್ತವನ್ನು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಳಸಿದರೆ, ಹರಾಜಿನಲ್ಲಿ ಬಳಸಬಹುದಾದ ಮೊತ್ತದಿಂದ ಕಡಿತಗೊಳಿಸುವುದಾಗಿ ಐಪಿಎಲ್‌ ಆಡಳಿತ ಮಂಡಳಿ ತಿಳಿಸಿದೆ.