Friday, 13th December 2024

IPL 2025 : ಹರಾಜಿನಲ್ಲಿ ಪಾಲ್ಗೊಂಡು ಆಟಕ್ಕೆ ಬರದಿದ್ದರೆ ಬ್ಯಾನ್‌; ಐಪಿಎಲ್‌ನಲ್ಲಿ ಹೊಸ ರೂಲ್ಸ್‌

IPL 2025

ಬೆಂಗಳೂರು: ಐಪಿಎಲ್ 2025 ರ (IPL 2025 ) ಮೆಗಾ ಹರಾಜಿಗೆ ಮುಂಚಿತವಾಗಿ ಹೊಸ ಮಾದರಿಯ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಐಪಿಎಲ್ ಆಡಳಿತ ಮಂಡಳಿ ಪ್ರಕಟಿಸಿದೆ. ಪ್ರಮುಖವಾಗಿ ಹೆಚ್ಚು ಸುವ್ಯವಸ್ಥಿತ ಹರಾಜು ಮತ್ತು ಆಟಗಾರರ ಲಭ್ಯತೆಯ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಿ ಆಟಗಾರರಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಬಯಸುವ ಯಾವುದೇ ಅಂತರರಾಷ್ಟ್ರೀಯ ಆಟಗಾರ “ಮೆಗಾ ಹರಾಜಿಗೆ” ನೋಂದಾಯಿಸಿಕೊಳ್ಳಬೇಕು. ಹಾಗೆ ಮಾಡಲು ವಿಫಲವಾದರೆ ಆಟಗಾರನು ಮುಂದಿನ ವರ್ಷದ ಹರಾಜಿಗೆ ಅನರ್ಹನಾಗುತ್ತಾನೆ.

ಅದೇ ರೀತಿ ಬದ್ಧತೆ ಮೀರುವ ಆಟಗಾರರಿಗೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಒಬ್ಬ ಆಟಗಾರನು ಹರಾಜಿಗೆ ನೋಂದಾಯಿಸಿಕೊಂಡು, ಫ್ರಾಂಚೈಸಿಯಿಂದ ಆಯ್ಕೆಯಾದರೆ ಆಟಕ್ಕೆಬರಲೇಬೇಕು. ಇಲ್ಲದೇ ಹೋದರೆ ಎರಡು ಋತುವಿನ ನಿಷೇಧವನ್ನು ಎದುರಿಸಬೇಕಾಗುತ್ತದೆ. ಈ ಹೊಸ ನೀತಿಯು ಫ್ರಾಂಚೈಸಿಗಳು ವಿಶ್ವಾಸಾರ್ಹ ಮತ್ತು ಬದ್ಧತೆಯ ಆಟಗಾರರನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಆಟಗಾರರ ಅಲಭ್ಯತೆಯಿಂದಾಗಿ ತಂಡಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಹೊಸ ನಿಯಮ ಏನನ್ನು ಸೂಚಿಸುತ್ತದೆ?

ವಿದೇಶಿ ಆಟಗಾರರ ವಿಷಯಕ್ಕೆ ಬಂದಾಗ. ಐಪಿಎಲ್‌ನ ಹಿಂದಿನ ಆವೃತ್ತಿಯಲ್ಲಿ ಅನೇಕ ಆಟಗಾರರು ವಿಶೇಷವಾಗಿ ವಿದೇಶಿ ತಾರೆಯರು ವೃತ್ತಿಪರ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಋತುವಿನ ಪ್ರಾರಂಭಕ್ಕೆ ಮುಂಚಿತವಾಗಿ ಹಿಂದೆ ಸರಿದಿದ್ದರು.

ಇದನ್ನೂ ಓದಿ: IPL 2025: ರೋಹಿತ್‌, ಕೊಹ್ಲಿ ಆಕ್ಷೇಪದ ಮಧ್ಯೆಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಸಲು ಬಿಸಿಸಿಐ ಚಿಂತನೆ

ಐಪಿಎಲ್‌ ಆಡಳಿತ ಮಂಡಳಿ 2025ರ ಮೆಗಾ ಹರಾಜಿಗೆ ಪರಿಷ್ಕೃತ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಎಲ್ಲಾ ಹತ್ತು ಫ್ರಾಂಚೈಸಿಗಳೊಂದಿಗೆ ಚರ್ಚಿಸಿದ ನಂತರ 2022 ರ ಹರಾಜಿನಲ್ಲಿ ಹಿಂದಿನ ನಾಲ್ಕು ಆಟಗಾರರಿಗೆ ಹೋಲಿಸಿದರೆ ತಂಡಗಳು ಈಗ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ. ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ನೇರ ಉಳಿಸಿಕೊಳ್ಳುವಿಕೆ ಅಥವಾ ರೈಟ್ ಟು ಮ್ಯಾಚ್ (ಆರ್ ಟಿಎಂ) ಕಾರ್ಡ್ ಬಳಸಿ ತಂಡಕ್ಕೆ ಸೇರಿಸಬಹುದು. ಆರ್ಟಿಎಂ ಕಾರ್ಡ್ ಫ್ರಾಂಚೈಸಿಗೆ ಹರಾಜಿಗೆ ಮೊದಲು ಬಿಡುಗಡೆ ಮಾಡಿದ ಆಟಗಾರನಿಗೆ ಮಾಡಿದ ಅತ್ಯಧಿಕ ಬಿಡ್‌ಗೆ ಹೊಂದಿಕೆಯಾಗಲು ನೆರವಾಗುತ್ತದೆ.

ಐಪಿಎಲ್ 2025ಗಾಗಿ ಫ್ರಾಂಚೈಸಿಗಳ ಹರಾಜು ಮೊತ್ತವನ್ನು 120 ಕೋಟಿ ರೂ.ಗೆ ಏರಿಸಲಾಗಿದೆ. ಒಟ್ಟು ವೇತನ ಮಿತಿಯು ಈಗ ಹರಾಜು ಪರ್ಸ್, ಕಾರ್ಯಕ್ಷಮತೆ ವೇತನ ಮತ್ತು ಪಂದ್ಯದ ಶುಲ್ಕವನ್ನು ಒಳಗೊಂಡಿರುತ್ತದೆ. ಈ ಹಿಂದೆ 2024 ರಲ್ಲಿ, ಒಟ್ಟು ವೇತನ ಮಿತಿ (ಹರಾಜು ಪರ್ಸ್ + ಹೆಚ್ಚಿದ ಕಾರ್ಯಕ್ಷಮತೆ ವೇತನ) 110 ಕೋಟಿ ರೂಪಾಯಿ ಇತ್ತು. ಅದನ್ನು ಈಗ 146 ಕೋಟಿ (2025), 151 ಕೋಟಿ (2026) ಮತ್ತು 157 ಕೋಟಿ (2027) ಗೆ ಏರಿಸಲಾಗಿದೆ.