Tuesday, 10th December 2024

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮುನಾಫ್‌ ಪಟೇಲ್‌ ಬೌಲಿಂಗ್‌ ಕೋಚ್‌!

Delhi Capitals appoints Munaf Patel as bowling coach ahead of Mega auction

ನವದೆಹಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಭಾರತ ತಂಡದ ಮಾಜಿ ವೇಗಿ ಮುನಾಫ್‌ ಪಟೇಲ್‌ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಡೆಲ್ಲಿ ಫ್ರಾಂಚೈಸಿಯ ಕೋಚಿಂಗ್‌ ವಿಭಾಗದಲ್ಲಿ ಇಲ್ಲಿಯವರೆಗೂ ಮೂರನೇ ಬದಲಾವಣೆ ಇದಾಗಿದೆ. ಅಂದ ಹಾಗೆ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದಲ್ಲಿ ನವೆಂಬರ್‌ 24 ಮತ್ತು 25 ರಂದು ನಡೆಯಲಿದೆ.

ಇದಕ್ಕೂ ಮುನ್ನ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಅವರನ್ನು ಮುಖ್ಯ ಕೋಚ್ ಆಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೇಮಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ಹೆಡ್‌ ಕೋಚ್‌ ಆಗಿ ಹೇಮಂಗ್‌ ಬದಾನಿ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಸ್ಥಾನವನ್ನು ತುಂಬಿದ್ದರು. ಇದಲ್ಲದೇ ವೇಣುಗೋಪಾಲ್ ರಾವ್ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ಡೆಲ್ಲಿ ಫ್ರಾಂಚೈಸಿ ನೇಮಿಸಿದೆ. ಕೋಚಿಂಗ್ ಸಿಬ್ಬಂದಿಯಲ್ಲಿ ಮುನಾಫ್ ಪಟೇಲ್ ಅವರನ್ನು ಸೇರಿಸುವ ಮೂಲಕ ಮೂರನೇ ಪ್ರಮುಖ ಬದಲಾವಣೆಯನ್ನು ಡೆಲ್ಲಿ ಮಾಡಿಕೊಂಡಿದೆ.

IPL 2025: ಲಖನೌ ಸೂಪರ್‌ ಜಯಂಟ್ಸ್‌ ತೊರೆಯಲು ಬಲವಾದ ಕಾರಣ ತಿಳಿಸಿದ ಕೆಎಲ್‌ ರಾಹುಲ್!

ಮುನಾಫ್ ಪಟೇಲ್ ಟೀಮ್‌ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿದ್ದರು. ಮುನಾಫ್ ಪಟೇಲ್ ಭಾರತ ತಂಡದ ಪರ 13 ಟೆಸ್ಟ್, 70 ಏಕದಿನ ಹಾಗೂ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಮುನಾಫ್ ಪಟೇಲ್ ಅವರು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ 35 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದರೆ, 86 ಏಕದಿನ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಟಿ20ಐನಲ್ಲಿ ಮುನಾಫ್ 4 ವಿಕೆಟ್ ಪಡೆದಿದ್ದಾರೆ.

ಇದಲ್ಲದೇ ಮುನಾಫ್ ಪಟೇಲ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ನಲ್ಲಿಯೂ ಆಡಿದ ಅನುಭವವನ್ನೂ ಹೊಂದಿದ್ದಾರೆ. ಮುನಾಫ್ ಪಟೇಲ್‌ ಅವರು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿದ್ದರು. ಇದೀಗ ಮತ್ತೊಮ್ಮೆ ಈ ಲೀಗ್‌ನಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ. ಆದರೆ, ಈ ಬಾರಿ ಅವರು ಕೋಚ್ ಆಗಿ ಬೌಲರ್‌ಗಳಿಗೆ ತರಬೇತಿ ನೀಡಲಿದ್ದಾರೆ.

IPL 2025: ಎಂಎಸ್‌ ಧೋನಿಯ ಐಪಿಎಲ್‌ ನಿವೃತ್ತಿ ಯಾವಾಗ? ಸಿಎಸ್‌ಕೆ ಸಿಇಒ ಮಹತ್ವದ ಮಾಹಿತಿ!

ಮುನಾಫ್‌ ಪಟೇಲ್‌ಗೆ ಐಪಿಎಲ್‌ ದಾಖಲೆಗಳು

ಮುನಾಫ್‌ ಪಟೇಲ್‌ ಅವರು ಐಪಿಎಲ್‌ ಟೂರ್ನಿಯಲ್ಲಿಯೂ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ರಾಜಸ್ಥಾನ್‌ ರಾಯಲ್ಸ್‌, ಮುಂಬೈ ಇಂಡಿಯನ್ಸ್‌ ಹಾಗೂ ಗುಜರಾತ್‌ ಲಯನ್ಸ್‌ ತಂಡಗಳ ಪರ ಆಡಿದ್ದಾರೆ. ಅವರು ಆಡಿದ 63ಇನಿಂಗ್ಸ್‌ಗಳಿಂದ 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ.