Monday, 9th December 2024

IPL 2025: ʻಜೆರಾಲ್ಡ್‌ ಕೊಯೆಡ್ಜಿಗೆ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತʼ-ಇದಕ್ಕೆ ಕಾರಣ ತಿಳಿಸಿದ ಡಿಕೆ!

Dinesh Karthik predicts windfall for South Africa star Gerald Coetzee in IPL auction

ನವದೆಹಲಿ: ಭಾರತ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್‌ ಜೆರಾಲ್ಡ್‌ ಕೊಯೆಡ್ಜಿ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಅಲ್ಲದೆ ಮುಂಬರುವ ಮೆಗಾ ಹರಾಜಿನಲ್ಲಿ (IPL 2025) ಜೆರಾಲ್ಡ್‌ ಕೊಯೆಡ್ಜಿ ಅವರು ಬಹುದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ.

ಅಂದ ಹಾಗೆ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯು ನವೆಂಬರ್‌ 24 ಮತ್ತು 25 ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದರು. ಆದರೆ, ಅವರನ್ನು ಮುಂಬೈ ಫ್ರಾಂಚೈಸಿ ಮೆಗಾ ಹರಾಜಿಗೆ ಬಿಡುಗಡೆಗೊಳಿಸಿತ್ತು. ಇದೀಗ ಅವರು ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಇವರು ವೇಗದ ಬೌಲಿಂಗ್‌ ಜೊತೆಗೆ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸದ್ಯ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ ಜೆರಾಲ್ಡ್‌ ಕೊಯೆಡ್ಜಿ ಅತ್ಯುತ್ತಮ ಪ್ರದರ್ಶನವನ್ನು ತೋರುತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ದಿನೇಶ್‌ ಕಾರ್ತಿಕ್‌, ಜೆರಾಲ್‌ ಕೊಯೆಡ್ಜಿ ಅವರ ಐಪಿಎಲ್‌ ಮೆಗಾ ಹರಾಜಿನಲ್ಲಿನ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ. ಆಫ್ರಿಕಾ ವೇಗಿ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 125 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಜೆರಾಲ್ಡ್‌ ಕೊಯೆಡ್ಜಿ ಅವರು ಸ್ಪೋಟಕ 19 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ತನ್ನ ತಂಡವನ್ನು ಗೆಲ್ಲಿಸಿದ್ದರು. ಕ್ರಿಕ್‌ಬಝ್‌ ಜೊತೆ ಮಾತನಾಡಿದ ದಿನೇಶ್‌ ಕಾರ್ತಿಕ್‌, “ದಕ್ಷಿಣ ಆಫ್ರಿಕಾ ತಂಡದ ಜೊತೆ ಜೆರಾಲ್ಡ್‌ ಕೊಯೆಡ್ಜಿ ಎಷ್ಟು ಪಂದ್ಯಗಳನ್ನು ಆಡಲಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಮುಂದಿನ ಕೆಲ ವಾರಗಳಲ್ಲಿ ಅವರು ಕೋಟಿ, ಕೋಟಿ ರೂ. ಗಳನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ. ತುಂಬಾ ಆಲೋಚನೆ ಮಾಡುವ ಆಟಗಾರ ಅವರು ಹಾಗೂ ಬ್ಯಾಟಿಂಗ್‌ ಬಗ್ಗೆಯೂ ಅವರು ಚಿಂತಿಸುತ್ತಾರೆ,” ಎಂದು ಹೇಳಿದ್ದಾರೆ.

“ದಕ್ಷಿಣ ಆಫ್ರಿಕಾ ತಂಡಕ್ಕೆ ಜೆರಾಲ್ಡ್‌ ಕೊಯೆಡ್ಜಿ ಶುಭ ಸಂಕೇತ. ಬೌಲಿಂಗ್‌ ಜೊತೆಗೆ ಏಳನೇ ಕ್ರಮಾಂಕದಲ್ಲಿ ಆಡಬಲ್ಲ ಆಲ್‌ರೌಂಡರ್ ಅವರಾಗಿದ್ದಾರೆ. ಒಂದು ವೇಳೆ ಮಾರ್ಕೊ ಯೆನ್ಸನ್‌ ಏಳನೇ ಕ್ರಮಾಂಕದಲ್ಲಿ ಆಡಿದರೆ, ಕೊಯೆಡ್ಜಿ 8ನೇ ಕ್ರಮಾಂಕದಲ್ಲಿ ಆಡಬೇಕು. ಬ್ಯಾಟಿಂಗ್‌ ಡೆಪ್ತ್‌ ಎಷ್ಟಿದೆ ಎಂದು ಇದರಿಂದ ತಿಳಿಯುತ್ತದೆ,” ಎಂದು ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಸಾಕಷ್ಟು ಶಕ್ತಿಯಿದೆ: ಜಹೀರ್‌ ಖಾನ್‌

ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಇತ್ತೀಚೆಗೆ ಮೆಂಟರ್‌ ಆಗಿ ನೇಮಕಗೊಂಡಿದ್ದ ಜಹೀರ್‌ ಖಾನ್‌ ಅವರು ಕೂಡ ಜೆರಾಲ್ಡ್‌ ಕೊಯೆಡ್ಜಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಠಿಣ ಪರಿಶ್ರಮ ಪಡುವ ಜೊತೆಗೆ ತಂಡಕ್ಕೆ ಯಾವುದೇ ಹಾದಿಯನ್ನು ಗೆದ್ದುಕೊಡುಬಲ್ಲ ಆಟಗಾರ ಎಂದು ಶ್ಲಾಘಿಸಿದ್ದಾರೆ.

“ಜೆರಾಲ್ಡ್‌ ಕೊಯೆಡ್ಜಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಶಕ್ತಿಯಿದೆ. ಈ ರೀತಿಯ ಆಟವನ್ನು ಆಡಬೇಕೆಂದೆ ಅವರು ತಯಾರಿ ಮಾಡಿದ್ದಾರೆ. ತಮ್ಮ ಪಾತ್ರವನ್ನು ಪೂರ್ಣಗೊಳಿಸಲು ಏನು ಬೇಕಾದರೂ ಮಾಡಬಲ್ಲ ಆಟಗಾರ ಅವರು. ತಂಡಕ್ಕೆ ಯಾವುದೇ ಹಾದಿಯಲ್ಲಿ ಕೊಡುಗೆ ನೀಡಲು ಅವರು ಸಿದ್ದರಾಗಿದ್ದಾರೆ. ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅವರು ಕೊಡುಗೆ ನೀಡಬಲ್ಲರು,” ಎಂದು ಜಹೀರ್‌ ಖಾನ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮುನಾಫ್‌ ಪಟೇಲ್‌ ಬೌಲಿಂಗ್‌ ಕೋಚ್‌!