Saturday, 14th December 2024

IPL 2025: ತಿಂಗಳಾಂತ್ಯದಲ್ಲಿ ಐಪಿಎಲ್​ ರಿಟೇನ್​ ನಿಯಮಾವಳಿ ಪ್ರಕಟ

IPL 2025

ಮುಂಬಯಿ: ಬಹುನಿರೀಕ್ಷಿತ ಐಪಿಎಲ್​ 18ನೇ(IPL 2025) ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಟಗಾರರ ರಿಟೇನ್​ ನಿಯಮಾವಳಿಯನ್ನು(IPL 2025 Retention Policy) ಬಿಸಿಸಿಐ(BCCI) ಮಾಸಾಂತ್ಯದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲ 10 ತಂಡಗಳು ಆಟಗಾರರ ರಿಟೇನ್​ ಪಟ್ಟಿ ಪ್ರಕಟಿಸಲು ನವೆಂಬರ್​ 15ರವರೆಗೆ ಸಮಯಾವಕಾಶ ಕಲ್ಪಿಸುವ ಸಾಧ್ಯತೆ ಕಂಡುಬಂದಿದೆ. ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಲಿದೆ.

ಈ ಹಿಂದೆನ ನಿರ್ಧಾರದ ಪ್ರಕಾರ ಆಗಸ್ಟ್​ ಅಂತ್ಯದಲ್ಲೇ ಆಟಗಾರರ ರಿಟೇನ್​ ನಿಯಮಾವಳಿ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಕೆಲ ಫ್ರಾಂಚೈಸಿಗಳ ಹಲವು ಬೇಡಿಕೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ನಿಯಮಾವಳಿ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಯಿತು. ಐಪಿಎಲ್‌ ಮೂಲಗಳ ಪ್ರಕಾರ ಸೆಪ್ಟೆಂಬರ್​ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್​ ನಿಯಮಾವಳಿ ಪ್ರಕಟವಾಗುವ ಸಾಧ್ಯತೆ ಇದೆ ತಿಳಿಸಿದೆ.

ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಪ್ರಾಂಚೈಸಿಗಳು ಒತ್ತಾಯಿಸಿದ್ದರೂ ಕೂಡ ಬಿಸಿಸಿಐ ಪ್ರತಿ ತಂಡಕ್ಕೆ ಗರಿಷ್ಠ 4 ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ ನೀಡಬಹುದು ಎನ್ನಲಾಗಿದೆ. ಇನ್ನೊಂದು ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವ ಆಟಗಾರರನ್ನು ‘ಅನ್​ಕ್ಯಾಪ್ಡ್​’ ಎಂದು ಪರಿಗಣಿಸಿ, ಕಡಿಮೆ ಮೊತ್ತಕ್ಕೆ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಮೊದಲ ಸೀಸನ್‌ನಿಂದ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಈ ನಿಯಮ ಜಾರಿಗೆ ತರಲು ಚಿಂತನೆ ನಡೆದಿದೆ.

ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಕೆಗೂ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ. ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ.