Thursday, 3rd October 2024

IPL 2025: ರಾಜಸ್ಥಾನ್‌ ರಾಯಲ್ಸ್‌ಗೆ ರಾಥೋರ್ ಬ್ಯಾಟಿಂಗ್‌ ಕೋಚ್‌

IPL 2025

ಮುಂಬಯಿ: ಮುಂಬರುವ ಐಪಿಎಲ್ 2025ರ(IPL 2025) ಆವೃತ್ತಿಗೆ ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡ ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿದ್ದ ವಿಕ್ರಮ್ ರಾಥೋರ್(Vikram Rathour) ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಈ ವಿಚಾರವನ್ನು ರಾಜಸ್ಥಾನ್‌ ರಾಯಲ್ಸ್‌ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಪ್ರಕಟಿದೆ. ಕೆಲ ವಾರಗಳ ಹಿಂದೆ ರಾಹುಲ್‌ ದ್ರಾವಿಡ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. ವಿಕ್ರಮ್‌ ರಾಥೋರ್‌ ಅವರು ರಾಹುಲ್‌ ದ್ರಾವಿಡ್‌ ಅವರಡಿಯಲ್ಲಿ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಆಗಿದ್ದರು. ಕಳೆದ ಟಿ20 ವಿಶ್ವಕಪ್‌ ಬಳಿಕ ಅವರ ಅಧಿಕಾರಾವಧಿ ಅಂತ್ಯವಾಗಿತ್ತು. ಇದೀಗ ಮತ್ತೆ ಈ ಜೋಡಿ ಜತೆಯಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ IPL 2025 : ಐಪಿಎಲ್ ಹರಾಜಿನ ದಿನಾಂಕ, ಸ್ಥಳ ಯಾವುದು, ಮಾಹಿತಿ ನೀಡಿದ ಬಿಸಿಸಿಐ

“ರಾಯಲ್ಸ್ ಕುಟುಂಬದ ಭಾಗವಾಗಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತಸದ ವಿಚಾರ. ಮತ್ತೊಮ್ಮೆ ರಾಹುಲ್ ದ್ರಾವಿಡ್‌ ಜತೆ ಕೆಲಸ ಮಾಡುವ ಸೌಭಾಗ್ಯ ಒದಗಿ ಬಂದಂತಾಗಿದೆ. ಯುವ ಕ್ರಿಕೆಟಿಗರ ಪ್ರತಿಭಾನ್ವಿತ ಗುಂಪಿನೊಂದಿಗೆ ಕೆಲಸ ಮಾಡಲು ಕಾತರಗೊಂಡಿದ್ದೇನೆ. ಎಲ್ಲ ಸಲಹೆಯೊಂದಿಗೆ ತಂಡ ಶ್ರೇಷ್ಠ ಪ್ರದರ್ಶನ ತೋರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಿದ್ದೇನೆ” 1990ರ ಸಮಯದಲ್ಲಿ ಟೀಂ ಇಂಡಿಯಾ ಪರವಾಗಿ ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದ ವಿಕ್ರಮ್‌ ರಾಥೋರ್‌ ಬಳಿಕ ಆಯ್ಕೆ ಸಮಿತಿ ಸದಸ್ಯರಾಗಿದ್ದರು.

ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ಇದಾದ ಬಳಿಕ ಒಂದೆಡರು ಬಾರಿ ಫೈನಲ್‌ ತಲುಪಿದ್ದರೂ ಕಪ್‌ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಆವೃತ್ತಿಯಲ್ಲಿ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಸೋಲು ಕಂಡು ಅಭಿಯಾನ ಮುಗಿಸಿತ್ತು.

2012 ಮತ್ತು 2013 ರ ಎರಡು ಋತುಗಳಲ್ಲಿ ರಾಜಸ್ಥಾನ್ ತಂಡದ ನಾಯಕನಾಗಿ ದ್ರಾವಿಡ್ ಹಳೆಯ ಒಡನಾಟವನ್ನು ಹೊಂದಿದ್ದು, ಆ ಬಳಿಕ ಎರಡು ವರ್ಷಗಳ ಕಾಲ ಮಾರ್ಗದರ್ಶಕರಾಗಿದ್ದರು. 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೆಂಟರ್ ಆಗಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಪಾತ್ರವನ್ನು ವಹಿಸಿಕೊಳ್ಳುವವರೆಗೂ ಡೆಲ್ಲಿ ತಂಡದಲ್ಲಿ ಮುಂದುವರೆದಿದ್ದರು.2021 ರಲ್ಲಿ, ರವಿಶಾಸ್ತ್ರಿ ಅವರಿಂದ ತೆರವಾದ ಭಾರತ ತಂಡದ ಮುಖ್ಯ ಕೋಚ್ ಪಾತ್ರ ವಹಿಸಿಕೊಂಡಿದ್ದರು. ರಾಜಸ್ಥಾನ್‌ಗೆ ದ್ರಾವಿಡ್ ಮತ್ತು ವಿಕ್ರಮ್ ರಾಥೋರ್ ಕೋಚಿಂಗ್‌ ಕಾಬಿಂನೇಶನ್‌ ಸಿಕ್ಕಿದ್ದು ತಂಡದ ಬಲ ಹೆಚ್ಚುವಂತೆ ಮಾಡಿದೆ.

ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು. ಈ ಸಲವೂ ಮಧ್ಯಪ್ರಾಚ್ಯ ದೇಶದಲ್ಲೇ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ. ಗಲ್ಫ್​ ನಗರಗಳಾದ ದೋಹಾ, ಮಸ್ಕತ್​ ಅಥವಾ ಅಬುಧಾಬಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ.