ಕೋಲ್ಕತಾ: 11ನೇ ಆವೃತ್ತಿಯ(ISL 2024) ಇಂಡಿಯನ್ ಸೂಪರ್ ಲೀಗ್(Indian Super League) ಫುಟ್ಬಾಲ್ ಟೂರ್ನಿ ಇಂದಿನಿಂದ( ಶುಕ್ರವಾರ) ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಕಳೆದ ಬಾರಿ ಫೈನಲಿಸ್ಟ್‌ಗಳಾದ ಮೋಹನ್ ಬಗಾನ್(Mohun Bagan) ಹಾಗೂ ಮುಂಬೈ ಎಫ್‌ಸಿ(Mumbai City FC) ಸೆಣಸಾಟ ನಡೆಸಲಿವೆ. ಈ ಪಂದ್ಯ ರಾತ್ರಿ 7.30ಕ್ಕೆ ಪ್ರಸಾರಗೊಳ್ಳಲಿದೆ. ಕನ್ನಡಿಗರ ನೆಚ್ಚಿನ ತಂಡವಾದ ಬೆಂಗಳೂರು ಎಫ್‌ಸಿ ಈ ಬಾರಿ ಈಸ್ಟ್ ಬೆಂಗಾಲ್ ವಿರುದ್ಧ ಸೆಪ್ಟೆಂಬರ್ 14ರಂದು ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ಡಬಲ್ ರೌಂಡ್ ರಾಬಿನ್
ಐ-ಲೀಗ್‌ನಲ್ಲಿ ಗೆದ್ದ ಮೊಹಮ್ಮೆದನ್ ಎಸ್‌ಸಿ ತಂಡ ಐಎಸ್‌ಎಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಈ ಬಾರಿ ಒಟ್ಟು 13 ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಪ್ರತಿ ತಂಡಗಳು ಇತರ 12 ತಂಡಗಳ ವಿರುದ್ದ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತದಲ್ಲಿ ತಲಾ 2 ಬಾರಿ ಮುಖಾಮುಖಿಯಾಗಲಿವೆ.
ಮೋಹನ್ ಬಾಗನ್ ತಂಡದ ನಾಯಕ ರಾಹುಲ್ ಭೆಕೆ, ಮಿಡ್‌ಫೀಲ್ಡರ್ ಅಪಿಯಾ, ಅಲ್ಬರ್ಟೊ ನೊಗವೆರಾ ಮತ್ತು ಸ್ಟ್ರೈಕರ್ ಜಾರ್ಜ್ ಪರೆರಾ ದಿಯಾಜ್ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಮುಂಬೈ ಸಿಟಿ ತಂಡದಲ್ಲಿ ಬ್ರೆಂಡನ್ ಫರ್ನಾಂಡಿಸ್, ಜೆರೆಮಿ ಮಂಝೊರೊ, ಜಾನ್ ತೊರಲ್, ಟಿ.ಪಿ. ರೆಹನಿಸ್, ನಿಕೊಲಸ್ ಕಾರೆಲಿಸ್, ಹಿತೇಶ್ ಶರ್ಮಾ ಮತ್ತು ಸಾಹಿಲ್ ಪನ್ವರ್ ಬಲಿಷ್ಠ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿಯ ಫೈನಲ್ ಸೋಲಿಗೆ ಈ ಬಾರಿ ಮೋಹನ್ ಬಾಗನ್ ತಂಡ ಮೊದಲ ಪಂದ್ಯದಲ್ಲಿಯೇ ಸೇಡು ತೀರಿಸಲು ಮುಂದಾಗಿದೆ. ಹೀಗಾಗಿ ಈ ಪಂದ್ಯ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ Cristiano Ronaldo: ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ವಿಶ್ವ ದಾಖಲೆ ಬರೆದ ರೊನಾಲ್ಡೊ
ಮುಖಾಮುಖಿ
ಮೋಹನ್ ಬಾಗನ್ ಮತ್ತು ಮುಂಬೈ ಎಫ್‌ಸಿ ಇದುವರೆಗೆ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಬಲಾಬಲದ ಲೆಕ್ಕಾಚಾರದಲ್ಲಿ ಮುಂಬೈ ಎಫ್‌ಸಿ ತಂಡವೇ ಮುಂದಿದೆ. ಮುಂಬೈ 7 ಪಂದ್ಯ ಗೆದ್ದರೆ, ಬಾಗನ್ ತಂಡ ಕೇವಲ 2 ಪಂದ್ಯ ಮಾತ್ರ ಗೆದ್ದಿದೆ. 3 ಪಂದ್ಯಗಳು ಡ್ರಾ ಗೊಂಡಿದೆ.
ಸಂಭಾವ್ಯ ತಂಡಗಳು
ಮೋಹನ್ ಬಾಗನ್: ವಿಶಾಲ್ ಕೈತ್ (ಗೋಲ್ ಕೀಪರ್), ಟಾಮ್ ಆಲ್ಡ್ರೆಡ್, ಆಲ್ಬರ್ಟೊ ರೋಡ್ರಿಗಸ್, ಸುಭಾಸಿಶ್ ಬೋಸ್, ಮನ್ವಿರ್ ಸಿಂಗ್, ಅನಿರುದ್ಧ್ ಥಾಪಾ, ಲಾಲೆಂಗ್ಮಾವಿಯಾ ರಾಲ್ಟೆ, ಸಹಲ್ ಅಬ್ದುಲ್ ಸಮದ್, ಲಿಸ್ಟನ್ ಕೊಲಾಕೊ, ಡಿಮಿಟ್ರಿ ಪೆಟ್ರಾಟೋಸ್, ಜೇಸನ್ ಕಮ್ಮಿಂಗ್ಸ್.
ಮುಂಬೈ ಎಫ್‌ಸಿ: ಫುರ್ಬಾ ಲಾಚೆನ್ಪಾ (ಗೋಲ್ ಕೀಪರ್), ಹ್ಮಿಂಗ್ಥನ್ಮಾವಿಯಾ ರಾಲ್ಟೆ, ತಿರಿ, ಮೆಹ್ತಾಬ್ ಸಿಂಗ್, ಸಂಜೀವ್ ಸ್ಟಾಲಿನ್, ಯೊಯೆಲ್ ವ್ಯಾನ್ ನೀಫ್, ಹಿತೇಶ್ ಶರ್ಮಾ, ಲಾಲಿಯನ್ಜುವಾಲಾ ಚಾಂಗ್ಟೆ, ಬ್ರಾಂಡನ್ ಫೆರ್ನಾಂಡಿಸ್, ಬಿಪಿನ್ ಸಿಂಗ್, ನಿಕೋಲಾಸ್ ಕರೇಲಿಸ್.