ಕುಮಾಮೊಟೊ (ಜಪಾನ್): ಭಾರತದ ಲಕ್ಷ್ಯ ಸೇನ್(Lakshya Sen) ಅವರು ಕುಮಾಮೊಟೊ ಮಾಸ್ಟರ್ಸ್ ಜಪಾನ್ ಬ್ಯಾಡ್ಮಿಂಟನ್ ಟೂರ್ನಿಯ(Japan Masters 2025) ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ(Loh Kean Yew) ಅವರನ್ನು 21-13, 21-17 ನೇರ ಗೇಮ್‌ಗಳಿಂದ ಸೋಲಿಸುವ ಮೂಲಕ ಈ ಸಾಧನೆಗೈದರು.
ಕೂಟದ ಏಳನೇ ಶ್ರೇಯಾಂಕಿತ ಮತ್ತು ಪ್ರಸ್ತುತ ವಿಶ್ವದ 15 ನೇ ಶ್ರೇಯಾಂಕಿತ ಸೇನ್, ವಿಶ್ವದ 9 ನೇ ಶ್ರೇಯಾಂಕಿತ ಲೋಹ್ ಅವರನ್ನು ಕೇವಲ 39 ನಿಮಿಷಗಳಲ್ಲಿ ಮಣಿಸಿದರು. ಈ ಮೂಲಕ ಲೋಹ್ ವಿರುದ್ಧ ಸೇನ್ ತಮ್ಮ ಹೆಡ್-ಟು-ಹೆಡ್ ಮುನ್ನಡೆಯನ್ನು 7–6ಕ್ಕೆ ವಿಸ್ತರಿಸಿದರು. ಈ ಫಲಿತಾಂಶವು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಹಾಂಗ್ ಕಾಂಗ್ ಓಪನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಸೇನ್‌ಗೆ ಗಮನಾರ್ಹ ಉತ್ತೇಜನ ನೀಡಿದೆ. ಸೆಮಿಫೈನಲ್‌ನಲ್ಲಿ ಸೇನ್ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್‌ನಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್ 11-8 ಮುನ್ನಡೆಯೊಂದಿಗೆ ಪಂದ್ಯದ ಆರಂಭದಲ್ಲಿ ಹಿಡಿತ ಸಾಧಿಸಿದರು. ಹೀಗೆ ಎದುರಾಳಿಗೆ ಒತ್ತಡವನ್ನು ಹೆಚ್ಚಿಸಿದರು. ಅಂತಿಮವಾಗಿ 21-13 ಅಂತರದಿಂದ ಗೆದ್ದು ಬೀಗಿರು. ಸೇನ್ ಅವರ ಸರ್ವತೋಮುಖ ಆಟವನ್ನು ಎದುರಿಸಲು ಲೋಹ್ ಹೆಣಗಾಡಿದರು. ಎರಡನೇ ಗೇಮ್‌ನಲ್ಲಿ ಲೋಹ್ ಹೆಚ್ಚಿನ ಪ್ರತಿರೋಧವನ್ನು ಪ್ರದರ್ಶಿಸಿದರೂ 17 ಅಂಕ ಗಳಿಸಲಷ್ಟೇ ಶಕ್ತರಾದರು.
ಇದನ್ನೂ ಓದಿ IND vs SA: ಸಾಯಿ ಸುದರ್ಶನ್ ಕೈಬಿಟ್ಟ ನಿರ್ಧಾರದಲ್ಲಿ ಅರ್ಥವಿಲ್ಲ; ದೊಡ್ಡ ಗಣೇಶ್ ಆಕ್ರೋಶ
ಲಕ್ಷ್ಯ ಸೇನ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಜನನ ಪ್ರಮಾಣಪತ್ರ ನಕಲಿ ಪ್ರಕರಣದಲ್ಲಿ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಾಗೂ ಅವರ ಕುಟುಂಬ ಸದಸ್ಯರು ಮತ್ತು ತರಬೇತುದಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಸುಪ್ರೀಂ ಕೋರ್ಟ್(Supreme Court) ರದ್ದುಗೊಳಿಸಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಎಂ.ಜಿ. ನಾಗರಾಜ್ ಅವರು ವಂಚನೆ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಪಂದ್ಯಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಸೇನ್ ಸಹೋದರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು.