Wednesday, 11th December 2024

ಸುಸ್ಥಿತಿಯಲ್ಲಿ ಕಿವೀಸ್: ಕೇನ್‌ ವಿಲಿಯಮ್ಸನ್ ’ಶತಕ’ ಆಧಾರ

ಮೌಂಟ್ ಮೌಂಗನುಯಿ:  ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ (129 ರನ್) ಸಿಡಿಸಿದ 23ನೇ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿ ಸುಸ್ಥಿತಿಯಲ್ಲಿ ನೆಲೆಸಿದೆ.

ಪಂದ್ಯದ 2ನೇ ದಿನ ಭಾನುವಾರ 3 ವಿಕೆಟ್‌ಗೆ 222 ರನ್‌ಗಳಿಂದ ಆಟ ಮುಂದುವರಿಸಿದ ಕಿವೀಸ್ ತಂಡ, ಚಹಾ ವಿರಾಮದ ಬಳಿಕ 431 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಪಾಕಿಸ್ತಾನ ತಂಡ ದಿನದಂತ್ಯಕ್ಕೆ 1 ವಿಕೆಟ್‌ಗೆ 30 ರನ್ ಗಳಿಸಿದ್ದು, 401 ರನ್ ಹಿನ್ನಡೆ ಯಲ್ಲಿದೆ.

94 ರನ್‌ನಿಂದ ದಿನದಾಟ ಆರಂಭಿಸಿದ ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್ (56) ಜತೆಗೂ ಶತಕದ ಜತೆಯಾಟವಾಡಿ ದರು. ಮೊದಲ ದಿನದಾಟದಲ್ಲಿ ಅವರು ರಾಸ್ ಟೇಲರ್ (70) ಜತೆ ಶತಕದ ಜತೆಯಾಟವಾಡಿದ್ದರು. ಭೋಜನ ವಿರಾಮಕ್ಕೆ ಮುನ್ನ ವಿಲಿಯಮ್ಸನ್ ಔಟಾದರೆ, ಬಳಿಕ ಬಿಜೆ ವಾಟ್ಲಿಂಗ್ (73) ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಕೇನ್ ವಿಲಿಯಮ್ಸನ್ ತಾನಾಡಿದ ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ರನ್‌ಪ್ರವಾಹವನ್ನೇ ಹರಿಸಿದ್ದಾರೆ. 2 ದ್ವಿಶತಕ, 1 ಶತಕ, 3 ಅರ್ಧಶತಕಗಳನ್ನು ಅವರು ಬಾರಿಸಿದ್ದಾರೆ.