Saturday, 14th December 2024

ಪಂಜಾಬ್‌ ತಂಡದ ಸೋಲಿನ ಸರಪಳಿ ಕಳಚುವುದೇ ?

ಶಾರ್ಜಾ: ಆರಂಭದಲ್ಲಿ ಗೆಲುವಿನ ಅಲೆಯಲ್ಲಿ ತೇಲಿದ್ದ ಕಿಂಗ್ಸ್‌ ಇಲೆವನ್ ಪಂಜಾಬ್ ಈಗ ತಳ ಕಂಡಿದೆ. ಅದೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮೂರನೇ ಸ್ಥಾನಕ್ಕೆ ಜಿಗಿದಿದೆ. ಇವೆರಡೂ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ.

ಕಳೆದ ಸೆ.24ರಂದು ಭರ್ಜರಿ ಶತಕ ಬಾರಿಸಿದ್ದ ರಾಹುಲ್ ಆಟದಿಂದಾಗಿ ಕಿಂಗ್ಸ್‌, ಬೆಂಗಳೂರು ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ಆರ್‌ಸಿಬಿಯು, ಕಿಂಗ್ಸ್‌ ಎದುರಿನ ಪಂದ್ಯದ ನಂತರ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿದೆ. ಒಂದರಲ್ಲಿ ಮಾತ್ರ ಸೋತಿದೆ. ಒಟ್ಟು 10 ಪಾಯಿಂಟ್ಸ್‌ಗಳನ್ನು ತನ್ನ ಖಾತೆಯಲ್ಲಿಟ್ಟುಕೊಂಡಿದೆ. ಮೊದಲ ಸುತ್ತಿನ ಅಂತ್ಯಕ್ಕೆ ಮೂರನೇ ಸ್ಥಾನ ಪಡೆದು ಕೊಂಡಿದೆ.

ಆರ್‌ಸಿಬಿಯಲ್ಲಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್, ಆಯರನ್ ಫಿಂಚ್, ವಿರಾಟ್ ಮತ್ತು ‘ಸೂಪರ್‌ ಮ್ಯಾನ್’ ಎಬಿ ಡಿ ವಿಲಿಯರ್ಸ್ ಅಮೋಘ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಎಬಿಡಿಯ ಸಿಡಿಲಬ್ಬರದ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳ ಮನಗಳಲ್ಲಿ ಅಚ್ಚೊತ್ತಿದೆ.

ಕ್ರಿಸ್ ಮೋರಿಸ್ ಅವರಿಂದಾಗಿ ಬೆಂಗಳೂರು ಬೌಲಿಂಗ್ ಕೂಡ ಬಲಿಷ್ಠಗೊಂಡಿದೆ. ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಎದುರಾಳಿ ತಂಡಗಳಿಗೆ ‘ಕಬ್ಬಿಣದ ಕಡಲೆ’ ಆಗುತ್ತಿದ್ದಾರೆ. ಮಧ್ಯಮ ವೇಗಿ ನವದೀಪ್ ಸೈನಿ ಕೂಡ ಪರಿಣಾಮಕಾರಿಯಾಗಿದ್ದಾರೆ. ಜೊತೆ ನೀಡಲು ಇಸುರು ಉಡಾನ ಮತ್ತು ಮೊಹಮ್ಮದ್ ಸಿರಾಜ್ ಕೂಡ ಇದ್ದಾರೆ.

ಪಂಜಾಬ್ ತಂಡ ಬೌಲಿಂಗ್‌ನಲ್ಲಿ ಎಡವುತ್ತಿದೆ. ಅಲ್ಲದೇ ಫೀಲ್ಡಿಂಗ್ ನಲ್ಲಿ ಆಗುತ್ತಿರುವ ಲೋಪಗಳು ತಂಡಕ್ಕೆ ದುಬಾರಿಯಾಗು ತ್ತಿವೆ. ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ‘ಫಿನಿಷರ್’ ಕೊರತೆ ಇರುವುದು ಎದ್ದು ಕಾಣುತ್ತಿದೆ. ಆರಂಭಿಕ ಜೋಡಿ ರಾಹುಲ್ ಮತ್ತು ಮಯಂಕ್ ಅಗರವಾಲ್ ರನ್‌ಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ.

ಬೌಲಿಂಗ್‌ ನಲ್ಲಿ ಮಧ್ಯಮವೇಗಿ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಮೇಲೆಯ ಅವಲಂಬಿತವಾಗುವ ಸಾಧ್ಯತೆ ಹೆಚ್ಚಿದೆ.