Wednesday, 11th December 2024

ಸೂಪರ್ ಓವರ್‌ನಲ್ಲಿ ಗೆದ್ದ ಕೋಲ್ಕತಾ

ಅಬುಧಾಬಿ: ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯುಸನ್ (15ಕ್ಕೆ 3, ಸೂಪರ್ ಓವರ್‌ನಲ್ಲಿ 2ಕ್ಕೆ 2) ಮಾರಕ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಕೋಲ್ಕತ ನೈಟ್‌ರೈಡರ್ಸ್‌ ತಂಡ ತನ್ನ 9ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿದೆ.

ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ (47*ರನ್) ಹೋರಾಟದಿಂದ ಸನ್‌ರೈಸರ್ಸ್‌ ತಂಡ ಟೈ ಸಾಧಿಸಿದರೂ, ಸೂಪರ್ ಓವರ್‌ನಲ್ಲಿ ಮುಗ್ಗರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ಸಂಘಟಿತ ಬ್ಯಾಟಿಂಗ್‌ನಿಂದ 5 ವಿಕೆಟ್‌ಗೆ 163 ರನ್ ಕಲೆಹಾಕಿತು.

ಪ್ರತಿಯಾಗಿ ಸನ್‌ರೈಸರ್ಸ್‌ ತಂಡ, ಅಂತಿಮ ಹಂತದಲ್ಲಿ ವಾರ್ನರ್ ಹಾಗೂ ಅಬ್ದುಲ್ ಸಮದ್ (23 ರನ್, 15 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿಯ ಹೋರಾಟದ ನಡುವೆಯೂ 6 ವಿಕೆಟ್‌ಗೆ 163 ರನ್ ಗಳಿಸಿ ಸಮಬಲ ಸಾಧಿಸಿತು. ಆದರೆ ಸೂಪರ್ ಓವರ್‌ನಲ್ಲಿ ಫರ್ಗ್ಯುಸನ್ ಮೊದಲ ಎಸೆತದಲ್ಲೇ ವಾರ್ನರ್‌ರನ್ನು ಬೌಲ್ಡ್ ಮಾಡಿದರೆ, 2ನೇ ಎಸೆತದಲ್ಲಿ ಅಬ್ದುಲ್ ಸಮದ್ 2 ರನ್ ಕಸಿದರೆ, 3ನೇ ಎಸೆತದಲ್ಲಿ ಅವರೂ ಬೌಲ್ಡ್ ಆದರು. 3 ರನ್‌ಗಳ ಸುಲಭ ಗುರಿ ಪಡೆದ ಕೆಕೆಆರ್, ಹೊಸ ನಾಯಕ ಇವೊಯಿನ್ ಮಾರ್ಗನ್ ಹಾಗೂ ಮಾಜಿ ನಾಯಕ ದಿನೇಶ್ ಕಾರ್ತಿಕ್ ಜೋಡಿಯ ಸಾಹಸದಿಂದ ನಾಲ್ಕೇ ಎಸೆತಗಳಲ್ಲಿ ಗೆಲುವಿನ ದಡ ಸೇರಿತು.

ಲಾಸ್ಟ್ ಓವರ್

ಸನ್‌ರೈಸರ್ಸ್‌ ಕಡೇ ಓವರ್‌ನಲ್ಲಿ ಜಯ ದಾಖಲಿಸಲು 18 ರನ್‌ಗಳ ಅವಶ್ಯಕತೆ ಇತ್ತು. ಕೆಕೆಆರ್ ಪರ ದಾಳಿಗಿಳಿದ ಆಂಡ್ರೆ ರಸೆಲ್ ಮೊದಲ ಎಸೆತ ವೈಡ್ ಮಾಡಿದರೆ, ಮರು ಎಸೆತವನ್ನು ನೋಬಾಲ್ ಮಾಡಿದರು. ಬಳಿಕ ಫ್ರೀ ಹಿಟ್ ಎಸೆತದಲ್ಲಿ ರಶೀದ್ ಖಾನ್ ಸಿಂಗಲ್ಸ್ ತಂದರು. ಸತತ 3 ಎಸೆತಗಳಲ್ಲೂ ವಾರ್ನರ್ ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ 2 ರನ್ ಕಸಿದರೆ, ಕಡೇ ಎಸೆತದಲ್ಲಿ ಸನ್‌ರೈಸರ್ಸ್‌ ಜಯ ದಾಖಲಿಸಲು 2 ರನ್ ಬದಲಾಗಿ ವಾರ್ನರ್ ಸಿಂಗಲ್ಸ್ ಕದಿಯಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯ ಟೈಗೊಂಡಿತು.