Saturday, 5th October 2024

ಲಾರ್ಡ್ಸ್ ಅಂಗಳದಲ್ಲಿ ಭಾರತದ ಹಿಡಿತ: ಕೆ.ಎಲ್.ರಾಹುಲ್ ಶತಕ, ರೋ’ಹಿಟ್’ ಅರ್ಧಶತಕ

ಲಂಡನ್: ಲಾರ್ಡ್ಸ್ ಅಂಗಳದಲ್ಲಿ ಕನ್ನಡಿಗ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (127*ರನ್)  ಸಿಡಿಸಿದ ಭರ್ಜರಿ ಶತಕ ಹಾಗೂ ರೋಹಿತ್ ಶರ್ಮ (83 ರನ್) ದಿಟ್ಟ ಬ್ಯಾಟಿಂಗ್‌ನಿಂದ ಭಾರತ ತಂಡ, ಉತ್ತಮ ಆರಂಭವನ್ನು ಕಂಡಿದೆ.

ಆತಿಥೇಯ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ರೋಹಿತ್-ರಾಹುಲ್ ಜೋಡಿ ಮೊದಲ ವಿಕೆಟ್‌ಗೆ ಕಲೆ ಹಾಕಿದ 126 ರನ್ ಜತೆಯಾಟದ ಫಲವಾಗಿ 79 ಓವರ್‌ಗಳಲ್ಲಿ 2 ವಿಕೆಟ್‌ಗೆ 249 ರನ್ ಪೇರಿಸಿ ಸುಸ್ಥಿತಿ ಯಲ್ಲಿದೆ. ಶತಕ ಪೂರೈಸಿರುವ ರಾಹುಲ್ ಆಟ ಮುಂದುವರಿಸಿದ್ದರೆ, ನಾಯಕ ವಿರಾಟ್ ಕೊಹ್ಲಿ (೪೨) ರನ್‌ ಗಳಿಸಿ ಔಟಾದರು. ಕ್ರೀಸ್‌’ನಲ್ಲಿ ಉಪನಾಯಕ ಅಜಿಂಕ್ಯ ರಹಾನೆ, ಕನ್ನಡಿಗನಿಗೆ ಸಾಥ್‌ ನೀಡುತ್ತಿದ್ದು, ಮೊದಲ ದಿನದ ಅಂತ್ಯಕ್ಕೆ ಮೂರು ವಿಕೆಟಿಗೆ 276 ರನ್‌ ಗಳಿಸಿತ್ತು.

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಆರಂಭಿಕ ಶತಕದ ಜೊತೆಯಾಟವಾಡುವ ಮೂಲಕ ಭಾರತದ ಪರ 69 ವರ್ಷಗಳ ದಾಖಲೆಯನ್ನ ಪುಡಿ ಮಾಡಿದರು. ರಾಹುಲ್ ರನ್ ಗಳಿಸುವ ಬದಲಿಗೆ ಕ್ರೀಸ್‌ನಲ್ಲೇ ಹೆಚ್ಚು ಹೊತ್ತು ನಿಲ್ಲುವ ಪ್ರಯತ್ನ ಮಾಡಿದರು. 14 ಓವರ್‌ಗಳಲ್ಲಿ 22 ರನ್ ಗಳಿಸಿದ್ದ ವೇಳೆ ಭಾರತದ ಇನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿತು. ಇದರಿಂದ ಭೋಜನ ವಿರಾಮವನ್ನು ನಿಗದಿತ ಅವಧಿಗೂ ಮೊದಲೇ ಘೋಷಿಸಲಾಯಿತು.

ಆಟ ಪುನರಾರಂಭಗೊಂಡ 2ನೇ ಓವರ್‌ನಲ್ಲೇ ರೋಹಿತ್ ಶರ್ಮ, ಸ್ಯಾಮ್ ಕರ‌್ರನ್ ಓವರ್‌ನಲ್ಲಿ 4 ಬೌಂಡರಿ ಸಿಡಿಸಿದರು. ಸುದೀರ್ಘ ಅವಧಿವರೆಗೆ ಇನಿಂಗ್ಸ್ ಕಟ್ಟಲು ಈ ಜೋಡಿ ಯತ್ನಿಸಿತು. ವಿದೇಶಿ ನೆಲದಲ್ಲಿ ಚೊಚ್ಚಲ ಶತಕದತ್ತ ದಾಪುಗಾಲಿಟ್ಟಿದ್ದ ರೋಹಿತ್‌ ಗೆ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಆಘಾತ ನೀಡಿ ದರು. ಮತ್ತೊಂದು ತುದಿಯಲ್ಲಿದ್ದ ರಾಹುಲ್, ಜೋಡಿ ನಿರ್ಗಮನದ ವೇಳೆಗೆ 118 ಎಸೆತಗಳಿಗೆ 33 ರನ್ ಕಲೆ ಹಾಕಿದ್ದರು.

ಮೂರನೇ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭದಂತಿರುವ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (9ರನ್) ವೈಫಲ್ಯ ಮುಂದುವರಿಸಿದರು. ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳಿಸಿದ್ದ ಪೂಜಾರ, ಸತತ 2ನೇ ಟೆಸ್ಟ್‌ನಲ್ಲೂ ದೊಡ್ಡ ಮೊತ್ತ ಪೇರಿಸಲು ವಿಫಲ ರಾದರು. ಪೂಜಾರ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ಕೊಹ್ಲಿ ರಾಹುಲ್‌ಗೆ ಇನಿಂಗ್ಸ್ ಕಟ್ಟಲು ಸಾಥ್ ನೀಡಿದರು. ಬಿರುಸಿನ ಬ್ಯಾಟಿಂಗ್‌ನಿಂದ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಸತತ 3ನೇ ಟೆಸ್ಟ್ ಪಂದ್ಯದಲ್ಲೂ 50 ಪ್ಲಸ್ ರನ್ ಸಿಡಿಸಿದರು.

ಗಾಯಾಳು ಶಾರ್ದೂಲ್ ಠಾಕೂರ್ ಬದಲಿಗೆ ಇಶಾಂತ್ ಶರ್ಮ ತಂಡಕ್ಕೆ ವಾಪಸಾದರು. ಆತಿಥೇಯ ಇಂಗ್ಲೆಂಡ್ ತಂಡ 3 ಬದಲಾವಣೆ ಮಾಡಿಕೊಂಡಿತು. ಡೇನಿಯಲ್ ಲಾರೆನ್ಸ್, ಜಾಕ್ ಕ್ರೌಲಿ ಹಾಗೂ ಸ್ಟುವರ್ಟ್ ಬ್ರಾಡ್ ಬದಲಿಗೆ ಮೊಯಿನ್ ಅಲಿ, ಹಸೀಬ್ ಹಮೀದ್ ಹಾಗೂ ಮಾರ್ಕ್ ವುಡ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು.

ದಾಖಲೆ: 1952ರ ನಂತರ ಮೊದಲ ಬಾರಿಗೆ ಲಾರ್ಡ್ಸ್ʼನಲ್ಲಿ ನಡೆದ ಭಾರತದ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಮತ್ತು ರಾಹುಲ್ 100 ರನ್ʼಗಳ ಆರಂಭಿಕ ಪಾಲುದಾರಿಕೆಯನ್ನ ಪೂರೈಸಿದರು. ವಿನೂ ಮಂಕಡ್ ಮತ್ತು ಪಂಕಜ್ ರಾಯ್ ಅವರು 1952ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ʼನ ತವರಿನಲ್ಲಿ ಮೊದಲ ವಿಕೆಟ್ʼಗೆ 106 ರನ್ ಗಳಿಸಿದಾಗ ಈ ಸಾಧನೆ ಮಾಡಿದ ಕೊನೆಯ ಭಾರತೀಯ ಆರಂಭಿಕ ಆಟಗಾರರಾಗಿದ್ದಾರೆ.

ರೋಹಿತ್ ಮತ್ತು ರಾಹುಲ್ ಅವರು ಲಾರ್ಡ್ಸ್ʼನಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ನಂತರ ಅತಿ ಹೆಚ್ಚು ಆರಂಭಿಕ ಪಾಲುದಾರಿಕೆ ದಾಟುವಲ್ಲಿ ಯಶಸ್ವಿಯಾದರ. 41ನೇ ಓವರ್ʼನಲ್ಲಿ 114 ರನ್ʼಗಳ ಗಡಿಯನ್ನ ದಾಟಿದರು.

ಇಂಗ್ಲೆಂಡ್ʼನ ಅಲಸ್ಟೇರ್ ಕುಕ್ ಮತ್ತು ಆಂಡ್ರ್ಯೂ ಸ್ಟ್ರಾಸ್ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 114ರನ್ ಗಳಿಸಿದರು. ಆಗಸ್ಟ್ 2016ರ ನಂತರ ಇಂಗ್ಲೆಂಡ್ʼನಲ್ಲಿ ನಡೆದ ಟೆಸ್ಟ್ʼನಲ್ಲಿ ಇದು ಎರಡನೇ 100 ರನ್ ಆರಂಭಿಕ ಪಾಲುದಾರಿಕೆಯಾಗಿದೆ. ಡೊಮ್ ಸಿಬ್ಲಿ ಮತ್ತು ರೋರಿ ಬರ್ನ್ಸ್ 2020ರಲ್ಲಿ ಓಲ್ಡ್ ಟ್ರಾಫೋರ್ಡ್ʼನಲ್ಲಿ ಕೊನೆಯ ಶತಕದ ರನ್ ಗಳಿಸಿದರು.