Friday, 13th December 2024

ಮಾಸ್ಟರ್‌ ಬ್ಲಾಸ್ಟರ್‌ ದಾಖಲೆ ಮುರಿದ ಚೇಸಿಂಗ್‌ ಕಿಂಗ್‌ ಕೊಹ್ಲಿ

ಕ್ಯಾನ್ ಬೆರಾ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್‌ ಪೂರ್ತಿಗೊಳಿಸಿದ ವಿರಾಟ್‌ ಕೊಹ್ಲಿ, ಈಗ ಮತ್ತೊಂದು ಸಾಧನೆಗೈದರು. ಆಸೀಸ್‌ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ 23 ರನ್‌ ಮಾಡಿದ ಅವರು ಏಕದಿನ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಪೂರೈಸಿ, ಅತೀ ವೇಗದಲ್ಲಿ ಈ ಸಾಧನೆಗೈದ ದಾಖಲೆಗೂ ಪಾತ್ರರಾದರು.

ಭರ್ತಿ 250 ಪಂದ್ಯಗಳನ್ನಾಡಿರುವ ಕೊಹ್ಲಿ 241 ಇನ್ನಿಂಗ್ಸ್‌ಗಳಿಂದ 11,977 ರನ್‌ ಬಾರಿಸಿದ್ದ, ಇಂದಿನ ಪಂದ್ಯದಲ್ಲಿ ಉಳಿದ 23 ರನ್‌ ಮಾಡಿದ ಅವರು ಸಚಿನ್‌ ತೆಂಡುಲ್ಕರ್‌ ದಾಖಲೆ ಮುರಿದಿದ್ದಾರೆ.

ಸಚಿನ್ 309ನೇ ಪಂದ್ಯದ 300ನೇ ಇನ್ನಿಂಗ್ಸ್‌ನಲ್ಲಿ 12 ಸಾವಿರ ರನ್‌ ಪೂರ್ತಿಗೊಳಿಸಿದ್ದರು. ಇದು 12 ಸಾವಿರ ರನ್ನುಗಳ ಅತೀ ವೇಗದ ದಾಖಲೆಯಾಗಿದೆ. ಕೊಹ್ಲಿ ಇದನ್ನು 50ಕ್ಕೂ ಹೆಚ್ಚು ಪಂದ್ಯಗಳಷ್ಟು ಬೇಗ ಪೂರೈಸಿರುವುದು ವಿಶೇಷ.

ಮೊದಲೆರಡು ಪಂದ್ಯ ಸೋತಿರುವ ಟೀಂ ಇಂಡಿಯಾ ಇಂದು ಗೆಲ್ಲುವುದು ಅನಿವಾರ್ಯವಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಐಪಿಎಲ್ ಹೀರೋ ಟಿ ನಟರಾಜನ್ ಪದಾರ್ಪಣೆ ಮಾಡಿದರೆ, ಶುಭ್ಮನ್ ಗಿಲ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.