Tuesday, 10th September 2024

Kumar Sangakkara : ಗೌತಮ್ ಗಂಭೀರ್ ಸ್ಥಾನಕ್ಕೆ ಕುಮಾರ ಸಂಗಕ್ಕಾರ ನೇಮಕ?

Kumar Sangakkara

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL) ಕೋಲ್ಕತಾ ನೈಟ್ ರೈಡರ್ಸ್ ತಂಡದ (KKR) ಮಾರ್ಗದರ್ಶಕರಾಗಿದ್ದ ಗೌತಮ್ ಗಂಭೀರ್ ಇದೀಗ ಭಾರತ ತಂಡದ ಕೋಚ್ ಆಗಿದ್ದಾರೆ. ಹೀಗಾಗಿ ಖಾಲಿ ಇರುವ ಆ ಸ್ಥಾನಕ್ಕೆ ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ (Kumar Sangakkara) ಅವರ ನೇಮಕವಾಗುವ ಸಾಧ್ಯತೆಗಳಿವೆ. ಟೆಲಿಗ್ರಾಫ್ ವರದಿಗಳ ಪ್ರಕಾರ, ಫ್ರಾಂಚೈಸಿ ಸಂಗಕ್ಕಾರ ಅವರನ್ನು ತಂಡಕ್ಕೆ ತರುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಹುದ್ದೆ ಖಾಲಿಯಾಗಿದೆ. ಗಂಭೀರ್‌ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ನಿವೃತ್ತಿಯ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2024 ರ ಟಿ 20 ವಿಶ್ವಕಪ್ ನಂತರ ಅವರ ನೇಮಕವಾಗಿದೆ.

ಐಪಿಎಲ್ 2022 ಮತ್ತು 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮಾರ್ಗದರ್ಶಕರಾಗಿದ್ದ ಗೌತಮ್ ಗಂಭೀರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ ಮುಂಚಿತವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫ್ರಾಂಚೈಸಿಯ ಮಾಜಿ ನಾಯಕ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದರು. ಆ ತಂಡಕ್ಕೆ ಮೂರನೇ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು. ಅವರ ನಾಯಕತ್ವದಲ್ಲಿ ಕೆಕೆಆರ್ ಎರಡು ಪ್ರಶಸ್ತಿಗಳನ್ನು ಗೆದ್ದಿತು.

ಗೌತಮ್ ಗಂಭೀರ್ ಭಾರತ ತಂಡವನ್ನು ಸೇರುವುದರೊಂದಿಗೆ, ಅವರ ಅನುಪಸ್ಥಿತಿಯು ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಶೂನ್ಯ ಸೃಷ್ಟಿಸುವುದರಲ್ಲಿ ಸಂದೇಹವಿಲ್ಲ. ಫ್ರಾಂಚೈಸಿ ಕುಮಾರ್ ಸಂಗಕ್ಕಾರ ಅವರಿಗೆ ಆ ಪಾತ್ರವನ್ನು ವಹಿಸುವ ಸಾಧ್ಯತೆಗಳಿವೆ.

2021 ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕರಾಗಿರುವ ಕುಮಾರ ಸಂಗಕ್ಕಾರ ಫ್ರಾಂಚೈಸಿಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ರಾಯಲ್ಸ್ ತಂಡ ನೇಮಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್ ಕೋಚಿಂಗ್ ಸೆಟಪ್ನ ಭಾಗವಾಗಿದ್ದ ವಿಕ್ರಮ್ ರಾಥೋರ್ ಮುಂದಿನ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ನಲ್ಲಿ ಕೋಚಿಂಗ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಧಿಕೃತ ಹೇಳಿಕೆಯನ್ನು ಇನ್ನೂ ಮಾಡಲಾಗಿಲ್ಲವಾದರೂ, ಬದಲಾವಣೆ ಶೀಘ್ರದಲ್ಲೇ ಸಂಭವಿಸಲಿದೆ.

ಕುಮಾರ್ ಸಂಗಕ್ಕಾರಗೆ ಹಲವು ತಂಡಗಳ ಆಫರ್‌

ರಾಜಸ್ಥಾನ್ ರಾಯಲ್ಸ್ ಹೊಸ ತರಬೇತುದಾರರನ್ನು ನೇಮಿಸುವುದರ ಮೂಲಕ ಅವರು ಅವರು ಆ ತಂಡ ತೊರೆಯುವುದು ಖಾತರಿ. ಆದಾಗಯೂ ಕುಮಾರ ಸಂಗಕ್ಕಾರ ಅವರು ಇತರ ಕೆಲವು ಫ್ರಾಂಚೈಸಿಗಳಿಂದ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಕೋಲ್ಕತಾ ನೈಟ್ ರೈಡರ್ಸ್‌ ತಂಡಕ್ಕೆ ಸಂಪೂರ್ಣ ಕೋಚಿಂಗ್ ಸೆಟಪ್ ಇಲ್ಲದ ಕಾರಣ ತರಬೇತುದಾರರ ಅಗತ್ಯವಿದೆ. ಅಲ್ಲಿಗೆ ಸಂಗಕ್ಕಾರ ಹೊಂದಿಕೆಯಾಗುತ್ತಾರೆ.

ಇದನ್ನೂ ಓದಿ: Ravindra Jadeja : ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ಗೌತಮ್ ಗಂಭೀರ್ ಮಾತ್ರವಲ್ಲ, ಫ್ರಾಂಚೈಸಿಯ ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಫೀಲ್ಡಿಂಗ್ ಕೋಚಿಂಗ್ ಜೊತೆಗೆ, ರಯಾನ್ ಟೆನ್ ಡೊಸ್ಚಾಟ್ ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಗಂಭೀರ್ ಅವರ ಸಹಾಯಕ ಸಿಬ್ಬಂದಿ ವರ್ಗವನ್ನು ಸೇರಿಕೊಂಡಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡವು ಕುಮಾರ ಸಂಗಕ್ಕಾರ ಅವರೊಂದಿಗೆ ಮುಂಚಿತವಾಗಿ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಐಪಿಎಲ್‌ನ ಕೋಚಿಂಗ್ ಪಾತ್ರದಲ್ಲಿ ಸಂಗಕ್ಕಾರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಲೀಗ್ಸ್‌ನಲ್ಲಿ ಸ್ಥಿರ ತಂಡವಾಗಿ ಪ್ಲೇ ಆಫ್ ತಲುಪಿದೆ. ಅವರು ಕೋಲ್ಕತಾ ನೈಟ್ ರೈಡರ್ಸ್‌ನ ಭಾಗವಾದರೆ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಶಕ್ತಿ ಹೆಚ್ಚಲಿದೆ.

Leave a Reply

Your email address will not be published. Required fields are marked *