Monday, 14th October 2024

ಎವಿನ್ ಲೂಯಿಸ್ ಅಬ್ಬರದೆದುರು ಮಂಕಾದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಇನಿಂಗ್ಸ್ ಅಂತ್ಯದಲ್ಲಿ ಎವಿನ್ ಲೂಯಿಸ್ ಅಬ್ಬರ (ಔಟಾಗದೆ 55, 23 ಎಸೆತ, 6 ಬೌಂಡರಿ, 3 ಸಿಕ್ಸರ್), ಕ್ವಿಂಟನ್ ಡಿಕಾಕ್(61 ರನ್, 45 ಎಸೆತ)ಹಾಗೂ ಕೆ.ಎಲ್.ರಾಹುಲ್(40 ರನ್,26 ಎಸೆತ)ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟದ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್’ಗೆ ಎರಡನೇ ಸೋಲನುಭವಿಸುವಂತೆ ಮಾಡಿದೆ.

ಗೆಲ್ಲಲು 211 ರನ್ ಕಠಿಣ ಗುರಿ ಬೆನ್ನಟ್ಟಿದ ಲಕ್ನೊ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಬ್ಯಾಟರ್ ರಾಬಿನ್ ಉತ್ತಪ್ಪ(50 ರನ್) ಹಾಗೂ ಆಲ್‌ರೌಂಡರ್ ಶಿವಂ ದುಬೆ(49 ರನ್, 30 ಎಸೆತ)ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು.

ಚೆನ್ನೈ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ (1 ರನ್)ವಿಕೆಟನ್ನು 3ನೇ ಓವರ್‌ನಲ್ಲಿ ಕಳೆದುಕೊಂಡಿತು. ಆಗ ಜೊತೆಯಾದ ಉತ್ತಪ್ಪ(50 ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್)ಹಾಗೂ ಮೊಯಿನ್ ಅಲಿ(35 ರನ್, 22 ಎಸೆತ, 4 ಬೌಂ.,2 ಸಿ.)2ನೇ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಉತ್ತಪ್ಪ ಹಾಗೂ ಮೊಯಿನ್ ಅಲಿ ಬೆನ್ನುಬೆನ್ನಿಗೆ ಔಟಾದರು. ಶಿವಂ ದುಬೆ (49 ರನ್, 30 ಎಸೆತ, 5 ಬೌಂ., 2 ಸಿ.) ಹಾಗೂ ರಾಯುಡು (27 ರನ್, 20 ಎಸೆತ, 2 ಬೌಂ., 2 ಸಿ.) 4ನೇ ವಿಕೆಟಿಗೆ 60 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ನಾಯಕ ರವೀಂದ್ರ ಜಡೇಜ(17 ರನ್,9 ಎಸೆತ) ಹಾಗೂ ಮಾಜಿ ನಾಯಕ ಎಂ.ಎಸ್. ಧೋನಿ(ಔಟಾಗದೆ 16, 6 ಎಸೆತ)ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಲಕ್ನೊ ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯಿ(2-24), ಆವೇಶ್ ಖಾನ್(2-38) ಹಾಗೂ ಆಯಂಡ್ರೂ ಟೈ(2-40)ತಲಾ ಎರಡು ವಿಕೆಟ್‌ಗಳನ್ನು ಪಡೆದರು.