ನವದೆಹಲಿ: ಅನುಭವಿ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ (Manish pandey) ಅವರನ್ನು ಮೂರೂ ಸ್ವರೂಪದ ಕರ್ನಾಟಕ ತಂಡದಿಂದ ಕೈ ಬಿಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (KSCA) ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥ ಜೆ ಅಭಿರಾಮ್ ಸ್ಪಷ್ಟಪಡಿಸಿದ್ದಾರೆ. ಅದರಂತೆ ಈ ತಿಂಗಳಾಂತ್ಯದಲ್ಲಿ ಆರಂಭವಾಗುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಕರ್ನಾಟಕ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಮನೀಷ್ ಪಾಂಡೆ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅಭಿರಾಮ್, “ಮನೀಷ್ ಪಾಂಡೆ ಅದ್ಭುತ ವೃತ್ತಿ ಜೀವನವನ್ನು ಹೊಂದಿದ್ದಾರೆ ಹಾಗೂ ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಹಂತದಲ್ಲಿ ನೀವು ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ನಮ್ಮಲ್ಲಿ ಪ್ರಖಾರ್ ಚರ್ತುವೇದಿ, ಅನೀಶ್ವರ್ ಗೌತಮ್, ಕೆವಿ ಅವಿನಾಶ್ ಅವರಂಥ ಅತ್ಯಾಕರ್ಷಕ ಯುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶಗಳು ಸಿಗುವುದು ಇಲ್ಲಿ ತುಂಬಾ ಮುಖ್ಯ,” ಎಂದು ತಿಳಿಸಿದ್ದಾರೆ.
ಎರಡನೇ ಹಂತದ ರಣಜಿ ಪಂದ್ಯಗಳಿಗೆ ಪಾಂಡ್ಯ ಅಲಭ್ಯ
2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲ ಅವಧಿಯಲ್ಲಿ ಕರ್ನಾಟಕ ತಂಡಕ್ಕೆ ಮನೀಷ್ ಪಾಂಡೆ ಉಪ ನಾಯಕನಾಗಿದ್ದರು. ರಣಜಿ ಟ್ರೋಫಿ ಎರಡನೇ ಹಂತದಲ್ಲಿ ಕರ್ನಾಟಕ ತಂಡದ ಪರ ಹಿರಿಯ ಬ್ಯಾಟ್ಸ್‌ಮನ್ ಆಡುವುದಿಲ್ಲ ಎಂದು ಕೆಎಸ್‌ಸಿಎ ಚೀಫ್ ಸೆಲೆಕ್ಟರ್ ಅಭಿರಾಮ್ ಸ್ಪಷ್ಟಪಡಿಸಿದ್ದಾರೆ,
“ರಣಜಿಉ ಟ್ರೋಫಿ ಟೂರ್ನಿಯ ಎರಡನೇ ಲೆಗ್‌ಗೆ ಮನೀಷ್ ಪಾಂಡೆ ಬರುವುದಿಲ್ಲ. ಕೆವಿ ಅನೀಷ್ ಮೀಸಲು ಆಟಗಾರನಾಗಿ ತಂಡದಲ್ಲಿದ್ದಾರೆ ಹಾಗೂ ಅವರು ಆಡಲಿದ್ದಾರೆ. ಆ ಮೂಲಕ ಯುವ ಬ್ಯಾಟ್ಸ್‌ಮನ್ ತಮಗೆ ಸಿಕ್ಕಿರುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಅಗತ್ಯವಿದೆ,” ಎಂದು ಅವರು ತಿಳಿಸಿದ್ದಾರೆ.
🚨 NO MANISH PANDEY FOR KARNATAKA….!!! 🚨
— Mufaddal Vohra (@mufaddal_vohra) December 11, 2024
KSCA Selection Committee Chairman said, "Manish has had a fantastic career, but at some stage, you'll have to make way for youngsters. We have a few exciting young batters and would like to give them opportunities". (Sportstar). pic.twitter.com/5WDRpJGOUG
ಮನೀಷ್ ಜತೆ ಈ ವಿಷಯದ ಬಗ್ಗೆ ಚರ್ಚಿಸಿದ್ದೇವೆ: ಅಭಿರಾಮ್
“ನಾನು ಈಗಾಗಲೇ ಮನೀಷ್ ಪಾಂಡೆ ಅವರ ಜತೆ ಮಾತನಾಡಿದ್ದೇನೆ ಹಾಗೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣಗಳನ್ನು ಅವರಿಗೆ ವಿವರಿಸಿದ್ದೇನೆ. ರಾಜ್ಯದ ಕೋಚ್ ಅಥವಾ ಬೇರೆ ಯಾವುದೇ ಹುದ್ದೆಯ ನಿರ್ವಹಿಸುವ ನಿಟ್ಟಿನಲ್ಲಿ ಅವರು ಕರ್ನಾಟಕ ಕ್ರಿಕೆಟ್ ಜತೆ ಸಂಪರ್ಕದಲ್ಲಿರಬೇಕೆಂದು ನಾವು ಬಯಸುತ್ತೇವೆ. ಈ ಕುರಿತು ನಡೆದಿದ್ದ ಸಂಭಾಷಣೆ ಅತ್ಯಂತ ಕಠಿಣವಾಗಿತ್ತು. ಆದರೆ, ಇದು ಜೀವನದ ಒಂದು ವೃತ್ತವಾಗಿದೆ,” ಎಂದು ಅಭಿರಾಮ್ ವಿವರಿಸಿದ್ದಾರೆ.
2007ರಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ
ಮನೀಷ್ ಪಾಂಡೆ ಅವರು 2007ರಲ್ಲಿ ಕರ್ನಾಟಕ ಪರ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2009ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮನೀಷ್ ಪಾಂಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 114 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಆ ಮೂಲಕ ದೊಡ್ಡ ಹೆಸರು ಮಾಡಿದ್ದರು. ಇನ್ನು ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 29 ಒಡಿಐ, 39 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಇವರು 118 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯ ಕರ್ನಾಟಕ ಸಂಭಾವ್ಯ ಆಟಗಾರರ ತಂಡ
ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಎಲ್ ಆರ್ ಚೇತನ್, ಮ್ಯಾಕ್ನೀಲ್ ನೊರೊನ್ಹಾ, ಶ್ರೇಯಸ್ ಗೋಪಾಲ್, ಕೆ.ಎಲ್ ಶ್ರೀಜಿತ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ವಿ.ಕೌಶಿಕ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಮೊಹ್ಸಿನ್ ಖಾನ್, ಆರ್ ಸ್ಮರಣ್, ಲವನೀತ್ ಸಿಸೋಡಿಯಾ, ವೈಶಾಕ್ ವಿಜಯ್‌ಕುಮಾರ್, ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಾಪ್, ಪ್ರವೀಣ್ ವೆಂಕಟೇಶ್ ದುಬೆ, ಎಂ. , ನಿಕಿನ್ ಜೋಸ್, ಕೆ.ವಿ. ಅನೀಶ್, ಕೆ.ಶಶಿಕುಮಾರ್, ಪಾರಸ್ ಗುರ್ಬಕ್ಸ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಬೇಡರೆ, ಹರ್ಷಿಲ್ ಧರ್ಮಾನಿ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ.
ಈ ಸುದ್ದಿಯನ್ನು ಓದಿ: IPL 2025: ಅನ್‌ಸೋಲ್ಡ್ ಆಟಗಾರರು ಕೂಡ ಐಪಿಎಲ್ ಆಡಬಹುದು! ಹೇಗೆ ಗೊತ್ತೆ?