Wednesday, 11th December 2024

Mayank Yadav: ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್‌ ಯಾದವ್‌

Mayank Yadav

ಗ್ವಾಲಿಯರ್‌: ಭಾನುವಾರ ರಾತ್ರಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ 22 ವರ್ಷದ ಮಯಾಂಕ್‌ ಯಾದವ್‌(Mayank Yadav) ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಹೌದು, ಮಯಾಂಕ್‌ ತಾವೆಸೆದ ಮೊದಲ ಓವರ್‌ ಮೇಡನ್‌ ಮಾಡುವ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಅಜಿತ್‌ ಅಗರ್ಕರ್‌(2006) ಮತ್ತು ಅರ್ಷದೀಪ್‌ ಸಿಂಗ್‌ (2022) ಈ ಸಾಧನೆ ಮಾಡಿದ್ದರು. ಯಯಾಂಕ್‌ ಒಟ್ಟು ನಾಲ್ಕು ಓವರ್‌ ಬೌಲಿಂಗ್‌ ದಾಳಿ ನಡೆಸಿ 21 ರನ್‌ ವೆಚ್ಚದಲ್ಲಿ ಒಂದು ವಿಕೆಟ್‌ ಪಡೆದರು. ಮೊಹಮ್ಮದುಲ್ಲ ವಿಕೆಟ್‌ ಕೀಳುವ ಮೂಲಕ ತಮ್ಮ ಅಂತಾರಾಷ್ಟ್ರೀಯ ವಿಕೆಟ್‌ ಖಾತೆ ತೆರೆದರು.

ಇದನ್ನೂ ಓದಿ IND vs BAN 1st T20: ಅರ್ಷದೀಪ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 7 ವಿಕೆಟ್‌ ಜಯ

ಮಾಯಾಂಕ್‌ ಯಾದವ್‌ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಬೌಲಿಂಗ್​ ಶ್ರೇಯಸ್ಸಿಗೆ ಇಶಾಂತ್‌ ಶರ್ಮ, ನವದೀಪ್‌ ಸೈನಿ ನೀಡಿದ ಸಲಹೆಯೂ ಕೂಡ ಕಾರಣ. ಈ ವಿಚಾರವನ್ನು ಸ್ವತಃ ಯಾದವ್ ಅವರೇ ಹೇಳಿಕೊಂಡಿದ್ದರು. ಬಡ ಕುಟುಂಬದಿಂದ ಬೆಳೆದು ಬಂದ ಪ್ರತಿಭೆ. ಯಾದವ್​ ಕ್ರಿಕೆಟ್​ ಆಡಲು ಆರಂಭಿಸಿದ್ದಾಗ ಅವರ ಬಳಿ ಹಾಕಿಕೊಳ್ಳಲು ಯೋಗ್ಯವಾದ ಶೂ ಕೂಡ ಇರಲಿಲ್ಲ. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದರು.

ಲಿಸ್ಟ್​ ‘ಎ’ಯಲ್ಲಿ 17 ಪಂದ್ಯಗಳನ್ನಾಡಿ 34 ವಿಕೆಟ್​ ಪಡೆದಿದ್ದಾರೆ. ದೇಶೀಯ ಟಿ20 ಟೂರ್ನಿಯಲ್ಲಿ 12 ಪಂದ್ಯ ಆಡಿ 18 ವಿಕೆಟ್​ ಕೆಡೆವಿದ್ದಾರೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 4 ಓವರ್​ ಎಸೆದು 14 ರನ್​ ನೀಡಿ 3 ವಿಕೆಟ್​ ವಿಕೆಟ್​ ಕಬಳಿಸಿದ್ದರು. ಮಯಾಂಕ್ ಪ್ರಸ್ತುತ ಐಪಿಎಲ್​ನಲ್ಲಿ ಅತ್ಯಂತ ವೇಗದ ಎಸೆತವನ್ನು ಎಸೆದು ಗಮನಸೆಳೆದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 156.7 kmph ವೇಗದಲ್ಲಿ ಚೆಂಡೆಸಿದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 kmph ವೇಗದಲ್ಲಿ ಬೌಲಿಂಗ್​ ನಡೆಸಿದ್ದರು.

ಪಂದ್ಯ ಗೆದ್ದ ಭಾರತ

ಇಲ್ಲಿನ ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ 14 ವರ್ಷಗಳ ಬಳಿಕೆ ನಡೆದ ಈ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಬಾಂಗ್ಲಾದೇಶ ನಾಟಕೀಯ ಕುಸಿತ ಕಂಡು19.5 ಓವರ್‌ಗಳಲ್ಲಿ 127 ರನ್‌ಗೆ ಕುಸಿಯಿತು. ಜವಾಬಿತ್ತ ಭಾರತ ಈ ಅಲ್ಪ ಮೊತ್ತವನ್ನು 11.5  ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ ಬಾರಿಸಿ ಗೆಲುವು ದಾಖಲಿಸಿತು.