Friday, 13th December 2024

ಹಾಲಿ ಚಾಂಪಿಯನ್ನರ ಪ್ಲೇ ಆಫ್ ಆಸೆ ಜೀವಂತ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ಗೆ 90 ರನ್ ಸೇರಿ ಸಿತು. ರಾಯಲ್ಸ್ ತಂಡದ ಎವಿನ್ ಲೂಯಿಸ್ 24 ಮತ್ತು ಯಶಸ್ವಿ ಜೈಸ್ವಾಲ್ 12 ರನ್ ಗಳಿಂದ ಉತ್ತಮ ಆರಂಭ ನೀಡುವ ಪ್ರಯತ್ನದಲ್ಲಿದ್ದರು. ಆದರೆ, ಕೌಲ್ಟರ್ ನೈಲ್ ಅದಕ್ಕೆ ಆಸ್ಪದ ನೀಡಲಿಲ್ಲ. ನಂತರದ 63 ರನ್ ಗಳ ಅಂತರದಲ್ಲಿ ಎಂಟು ವಿಕೆಟ್ ಗಳು ಪತನವಾದವು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ 22, ಇಶಾನ್ ಕಿಶಾನ್ 50 ಹಾಗೂ ಸೂರ್ಯ ಕುಮಾರ್ 13 ರನ್ ಗಳಿಸುವುದರೊಂದಿಗೆ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಸೇರಿಸಿ ಸುಲಭ ಜಯ ಸಾಧಿಸಿತು.

ಕೌಲ್ಟರ್ ನೈಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, 8ನೇ ಸೋಲು ಕಂಡ ರಾಜಸ್ಥಾನ ರಾಯಲ್ಸ್ ತಂಡ ಲೀಗ್‌ನಿಂದ ಹೊರಬಿದ್ದ 3ನೇ ತಂಡ ಎನಿಸಿಕೊಂಡಿತು. ಪ್ಲೇಆಫ್ ಹಂತಕ್ಕೇರುವ ಆಸೆ ಜೀವಂತ ವಿರಿಸಿರುವ ರೋಹಿತ್ ಶರ್ಮ ಬಳಗ ಶುಕ್ರವಾರ ನಡೆಯಲಿರುವ ತನ್ನ ಕಡೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಇದೀಗ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ 4ನೇ ಸ್ಥಾನಿಯಾಗಿ ಪ್ಲೇಆಫ್ ಹಂತಕ್ಕೇರಲು ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಟಾಸ್ ಜಯಿಸಿದ ಮುಂಬೈ ನಾಯಕ ರೋಹಿತ್ ಶರ್ಮ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ವೇಗಿಗಳಾದ ನಾಥನ್ ಕೌಲ್ಟರ್ ನಿಲ್ (14ಕ್ಕೆ 4), ಜೇಮ್ಸ್ ನೀಶಾಮ್ (12ಕ್ಕೆ 3), ಜಸ್‌ಪ್ರೀತ್ ಬುಮ್ರಾ (14ಕ್ಕೆ 2) ರಾಯಲ್ಸ್‌ಗೆ ಕಡಿವಾಣ ಹೇರುವಲ್ಲಿ ಯಶಸ್ವಿ ಯಾದರು.

ರಾಜಸ್ಥಾನ ರಾಯಲ್ಸ್: 9 ವಿಕೆಟ್‌ಗೆ 90

ಮುಂಬೈ ಇಂಡಿಯನ್ಸ್: 8.2 ಓವರ್‌ಗಳಲ್ಲಿ 2 ವಿಕೆಟ್‌ಗೆ 94 (ಇಶಾನ್ ಕಿಶನ್ 50*)