Friday, 13th December 2024

ಕೆ.ಎಲ್. ರಾಹುಲ್ ಶತಕ: ಆರನೇ ಸೋಲುಂಡ ಮುಂಬೈ

ಮುಂಬೈ: ನೂರನೇ ಐಪಿಎಲ್ ಪಂದ್ಯ ಆಡಿದ ಕೆ.ಎಲ್. ರಾಹುಲ್ ಅಮೋಘ ಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 18 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿರುವ ಲಖನೌ, ಒಟ್ಟು ಎಂಟು ಅಂಕಗಳನ್ನು ಸಂಪಾದಿ ಸಿದೆ.

ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಸತತ ಆರನೇ ಸೋಲಿನ ಮುಖ ಭಂಗಕ್ಕೊಳಗಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಲಖನೌ, ನಾಯಕ ಕೆ.ಎಲ್. ರಾಹುಲ್ ಅವರ ಮೂರನೇ ಐಪಿಎಲ್ ಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಮುಂಬೈ ನಿಯಮಿತ ವಾಗಿ ವಿಕೆಟ್‌ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಸಾಧ್ಯ ವಾಯಿತು.

ಸೂರ್ಯ-ತಿಲಕ್ ನಾಲ್ಕನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದು ಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರು. ಸೂರ್ಯ 37 (27 ಎಸೆತ, 3 ಬೌಂಡರಿ) ಹಾಗೂ ತಿಲಕ್ 26 ರನ್ (26 ಎಸೆತ, 1 ಬೌಂಡರಿ) ಗಳಿಸಿದರು.

ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಲಖನೌ ಪರ ಆವೇಶ್ ಖಾನ್ ಮೂರು ವಿಕೆಟ್ ಗಳಿಸಿದರು.

ರಾಹುಲ್, ತಮ್ಮ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು. ಲಖನೌ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ (24) ಉತ್ತಮ ಆರಂಭವೊದಗಿಸಿದರು.

ಬಳಿಕ ಮನೀಶ್ ಪಾಂಡೆ ಜೊತೆ ಸೇರಿದ ರಾಹುಲ್ ಎರಡನೇ ವಿಕೆಟ್‌ಗೂ 72 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಪಾಂಡೆ 38 ರನ್ ಗಳಿಸಿ ಔಟ್ ಆದರು. 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ ರಾಹುಲ್, ಮುಂಬೈ ಬೌಲರ್‌ಗಳನ್ನು ದಂಡಿಸಿದರು.

60 ಎಸೆತಗಳನ್ನು ಎದುರಿಸಿದ ರಾಹುಲ್ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 103 ರನ್ ಗಳಿಸಿ ಔಟಾಗದೆ ಉಳಿದರು.