Saturday, 14th December 2024

ಮುಂಬೈಗೆ ಸತತ ಎರಡನೇ ಗೆಲುವು

ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ಸತತ ಎರಡನೇ ಗೆಲುವು ದಾಖಲಿಸಿದೆ.

ರಶೀದ್ ಖಾನ್ (24ಕ್ಕೆ 2 ವಿಕೆಟ್) ಮತ್ತು ವೃದ್ಧಿಮಾನ್ ಸಹಾ (55) ಹಾಗೂ ಶುಭಮನ್ ಗಿಲ್ (52) ಹೋರಾಟವು ವ್ಯರ್ಥವೆನಿಸಿದೆ.

10 ಪಂದ್ಯಗಳಲ್ಲಿ ಮುಂಬೈ ಎರಡನೇ ಗೆಲುವು ದಾಖಲಿಸಿದೆ. ಆದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ತ ಹಾರ್ದಿಕ್ ಪಾಂಡ್ಯ ಬಳಗ 11 ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿದೆ. ಆದರೂ 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಗುಜರಾತ್‌ಗೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಆರಂಭದಲ್ಲಿ ಗಿಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ವೃದ್ಧಿಮಾನ್ ಬಿರುಸಿನ ಆಟವಾಡಿದರು.

10 ಓವರ್‌ ಅಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 83 ರನ್ ಬೇಕಾಗಿತ್ತು.

ಈ ಜೋಡಿ ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 106 ರನ್ ಒಟ್ಟು ಸೇರಿಸಿ ದರು. ಗಿಲ್ 36 ಎಸೆತಗಳಲ್ಲಿ 52 ಮತ್ತು ಸಹಾ 40 ಎಸೆತಗಳಲ್ಲಿ 55 ರನ್ ಗಳಿಸಿದರು. ಅವರಿಬ್ಬರು ತಲಾ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. 18ನೇ ಓವರ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (24) ರನೌಟ್ ಆಗುವುದರೊಂದಿಗೆ ಗುಜರಾತ್ ಹಿನ್ನಡೆ ಅನುಭವಿಸಿತು.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್, ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿತ್ತು ಎಂಬುದು ಗಮನಾರ್ಹ.

ಆದರೆ ಈ ಬಾರಿ ಕೊನೆಯ ಎಸೆತದಲ್ಲಿ ಮಿಲ್ಲರ್ ಸಿಕ್ಸರ್ ಗಳಿಸಲು ವಿಫಲರಾಗುವುದರೊಂದಿಗೆ ಗುಜರಾತ್ ಸೋಲಿಗೆ ಶರಣಾಯಿತು.

ಸ್ಯಾಮ್ಸ್ 3 ಓವರ್‌ಗಳಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿ ಎನಿಸಿದರು. ಜಸ್‌ಪ್ರೀತ್ ಬೂಮ್ರಾ 48 ರನ್ ಬಿಟ್ಟುಕೊಟ್ಟು ದುಬಾರಿ ಯಾದರು.

ಈ ಮೊದಲು ನಾಯಕ ರೋಹಿತ್ ಶರ್ಮಾ (43), ಇಶಾನ್ ಕಿಶನ್ (45) ಹಾಗೂ ಟಿಮ್ ಡೇವಿಡ್ (44*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು.

ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಕಿಶನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ರೋಹಿತ್ ಆಕ್ರಮಣಕಾರಿ ಆಟವಾಡಿದರು.

ರೋಹಿತ್ ಹಾಗೂ ಇಶಾನ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 74 ರನ್ ಗಳಿಸಿದರು. ರೋಹಿತ್ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ಅತ್ತ ಇಶಾನ್ ಕಿಶನ್ 29 ಎಸೆತಗಳಲ್ಲಿ 45 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು.

ತಿಲಕ್ ವರ್ಮಾ (21 ರನ್, 16 ಎಸೆತ) ಅವರು ಟಿಮ್ ಡೇವಿಡ್ ಜೊತೆ ಉಪಯುಕ್ತ ಜೊತೆಯಾಟದಲ್ಲಿ ಭಾಗಿಯಾದರೂ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಡೇವಿಡ್, ಮುಂಬೈ 177 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 21 ಎಸೆತಗಳನ್ನು ಎದುರಿಸಿದ ಡೇವಿಡ್ ರನ್ (ಅಜೇಯ 44 ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.