ನವದೆಹಲಿ: ಶನಿವಾರದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಮುಂಬೈ ಬೌಲಿಂಗ್, ಡೆಲ್ಲಿ ಬ್ಯಾಟಿಂಗ್ ಎದುರು ಧರಾಶಾಹಿಯಾಯಿತು.
ಮೊದಲ ಓವರಿನಿಂದಲೇ ಬೌಂಡರಿ, ಸಿಕ್ಸರ್ ಗಳ ಸುರಿಮಳೆ ಆರಂಭವಾಯಿತು. ಆರಂಭಿಕರಾದ ಅಭಿಷೇಕ್ ಪೊರೇಲ್ ಹಾಗೂ ಜೇಕ್ ಫ್ರೇಜರ್ ಮೊದಲ ವಿಕೆಟಿಗೆ 114 ರನ್ನುಗಳ ಜತೆಯಾಟ ನೀಡಿದರು. ಈ ಹಂತದಲ್ಲಿ ಫ್ರೇಜರ್ ಹನ್ನೊಂದು ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 84 ರನ್ ಹೊಡೆದು ಔಟಾದರು. ಪೊರೇಲ್ ಕೂಡ 36 ರನ್ ಬಾರಿಸಿ ನಬಿಗೆ ವಿಕೆಟ್ ಒಪ್ಪಿಸಿದರು.
ಇತ್ತೀಚಿನ ವರದಿ ಪ್ರಕಾರ, ಡೆಲ್ಲಿ ತಂಡ 11 ಓವರ್ ಅಂತ್ಯವಾದಾಗ ಎರಡು ವಿಕೆಟ್ ನಷ್ಟಕ್ಕೆ 138 ರನ್ ಪೇರಿಸಿತ್ತು.
ಮೊದಲ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ತಂಡವು ಜಯಿಸಿತ್ತು. ಎಂಟನೇ ಸ್ಥಾನದಲ್ಲಿರುವ ಹಾರ್ದಿಕ್ ಬಳಗವೂ ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಬೇಕಾದರೆ ಇನ್ನುಳಿದಿರುವ ತನ್ನ ಪಾಲಿನ ಆರು ಪಂದ್ಯಗಳನ್ನು ಜಯಿಸುವ ಒತ್ತಡದಲ್ಲಿದೆ.
ಡೆಲ್ಲಿ ತಂಡವು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಬಡ್ತಿ ಪಡೆಯಲು ನೆರವಾಗಿದೆ. ಈ ಪಂದ್ಯದಲ್ಲಿಯೂ ಜಯಿಸಿದರೆ, ಪ್ಲೇ ಆಫ್ ನತ್ತ ಸಾಗಲು ತಂಡಕ್ಕೆ ಹೆಚ್ಚಿನ ಬಲ ಬರಲಿದೆ.
ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಗೆರಾಲ್ಡ್ ಕೋಜಿ ಅವರಿರುವ ಬೌಲಿಂಗ್ ಪಡೆಯೂ ಉತ್ತಮವಾಗಿದೆ.
ಡೆಲ್ಲಿ ತಂಡದ ಬ್ಯಾಟಿಂಗ್ ಪಡೆಯ ಬಲ ಹೆಚ್ಚಲು ರಿಷಭ್ ಫಾರ್ಮ್‌ಗೆ ಮರಳಿರುವುದು ಕಾರಣ. ಕಳೆದ ಪಂದ್ಯದಲ್ಲಿ ಅವರ ಅಮೋಘ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ತಂಡವು ಜಯಿಸಿತ್ತು. ವಿಕೆಟ್‌ಕೀಪಿಂಗ್‌ನಲ್ಲಿಯೂ ಚುರುಕಾಗಿದ್ದಾರೆ. ರಿಷಭ್ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಮೊದಲ ವಿಕೆಟ್‌ಕೀಪರ್ ಆಗಿ ತೆರಳುವುದು ಬಹುತೇಕ ಖಚಿತವಾಗಿದೆ.
ಸ್ಪಿನ್ನರ್ ಕುಲದೀಪ್ ಯಾದವ್, ವೇಗಿ ಮುಕೇಶ್ ಕುಮಾರ್, ಖಲೀಲ್ ಅಹಮದ್ ಮತ್ತು ಅನುಭವಿ ಇಶಾಂತ್ ಶರ್ಮಾ ಅವರಿಗೆ ಮುಂಬೈ ಬ್ಯಾಟರ್ ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಸವಾಲು ಇದೆ.