Saturday, 14th December 2024

Mohammad Amir: 2ನೇ ಬಾರಿಗೆ ಕ್ರಿಕೆಟ್‌ ನಿವೃತ್ತಿ ಘೋಷಿಸಿದ ಪಾಕ್‌ ವೇಗಿ

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಎಡಗೈ ಮೊಹಮ್ಮದ್‌ ಆಮೀರ್(Mohammad Amir) ಅವರು 2ನೇ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದಕ್ಕೂ ಮುನ್ನ 2021ರಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮತ್ತು ಟೀಮ್‌ ಮ್ಯಾನೇಜ್​ಮೆಂಟ್ ವಿರುದ್ಧ ಅಸಮಾಧಾನಗೊಂಡು ಹಠಾತ್‌ ನಿವೃತ್ತಿ ಘೋಷಿಸಿದ್ದರು.

2021ರಲ್ಲಿ ನಿವೃತ್ತಿ ಘೋಷಿಸಿದ್ದ ಅಮೀರ್ ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ಗೂ ಮುನ್ನ ತಮ್ಮ ನಿವೃತ್ತಿ ಹಿಂಪಡೆದು ಮತ್ತೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಖಚಿತಪಡಿಸಿದರು.

32 ವರ್ಷದ ಅಮೀರ್ 2010ರ ಇಂಗ್ಲೆಂಡ್‌ ಪ್ರವಾಸದಲ್ಲಿ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ 5 ವರ್ಷ ನಿಷೇಧ ಶಿಕ್ಷೆ ಎದುರಿಸಿದ್ದರು. ನಂತರ ಕಾನೂನು ಹೋರಾಟ ನಡೆಸಿ ಆಜೀವ ನಿಷೇಧ ಶಿಕ್ಷೆಯಿಂದ ವಿನಾಯಿತಿ ಪಡೆದು 2016ರಲ್ಲಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದರು. ಪಾಕ್​ ಪರ ಆಮಿರ್​ 36 ಟೆಸ್ಟ್‌, 61 ಏಕ ದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ 271(ಏಕದಿನ 81, ಟೆಸ್ಟ್‌ 119, ಟಿ20 71) ವಿಕೆಟ್‌ ಕಿತ್ತಿದ್ದಾರೆ.

“ನಿವೃತ್ತಿ ನಿರ್ಧಾರ ಅಷ್ಟು ಸುಲಭವಲ್ಲ, ಆದರೆ ಮುಂದಿನ ಪೀಳಿಗೆಯ ಆಟಗಾರರಿಗೆ ಅವಕಾಶ ಮಾಡಿಕೊಡಲು ಇದು ಇದು ಸೂಕ್ತ ಸಮಯ. ಕುಟುಂಬದೊಂದಿಗೆ ಚರ್ಚಿಸಿದ ನಂತರ ನಾನು ಈ ನಿರ್ಧಾರ ಕೈಗೊಂಡಿದ್ದಾನೆ. ಹಸಿರು ಜರ್ಸಿ ಧರಿಸಿ ನನ್ನ ದೇಶಕ್ಕೆ 2 ಬಾರಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟವೇ ಸರಿ” ಎಂದು ಆಮೀರ್ ಹೇಳಿದರು.

ಇದನ್ನೂ ಓದಿ AUS vs IND: ಭಾರೀ ಮಳೆ; 13.2 ಓವರ್‌ಗೆ ದಿನದಾಟ ಅಂತ್ಯ

ಒಂದು ದಿನದ ಹಿಂದೆ ಪಾಕ್‌ ಆಲ್‌ರೌಂಡರ್‌ ಇಮಾದ್‌ ವಸೀಮ್‌ (Imad Wasim) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರದ್ದು ಕೂಡ 2 ನೇ ಬಾರಿ ನಿವೃತ್ತಿ ಇದಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿಯೇ ಇಮಾದ್‌ ವಸೀಮ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಆದರೆ, 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸಲುವಾಗಿ ಅವರುನಿವೃತ್ತಿಯಿಂದ ಹೊರ ಬಂದಿದ್ದರು.

ಇಮಾದ್ ವಸೀಮ್ 2015ರಲ್ಲಿ ಪಾಕಿಸ್ತಾನದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಶೀಘ್ರದಲ್ಲೇ ಅವರು ತಮ್ಮ ಆಲ್‌ರೌಂಡರ್ ಸಾಮರ್ಥ್ಯದಿಂದ ಪಾಕಿಸ್ತಾನ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು. ಒಂದು ಸಮಯದಲ್ಲಿ ಅವರು ಪಾಕಿಸ್ತಾನ ತಂಡದ ನಾಯಕನ ರೇಸ್‌ನಲ್ಲಿದ್ದರು. ಆದರೆ ಪಾಕಿಸ್ತಾನ ತಂಡದಲ್ಲಿ ನಿರಂತರ ಗುಂಪುಗಾರಿಕೆಯಿಂದಾಗಿ ಅವರನ್ನು ತಂಡದಿಂದ ತೆಗೆದುಹಾಕಲಾಗಿತ್ತು.

ಇಮಾದ್ ವಸೀಮ್‌ ಪಾಕಿಸ್ತಾನ ತಂಡದ ಪರ 55 ಏಕದಿನ ಪಂದ್ಯಗಳು ಮತ್ತು 75 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಇಮಾದ್ ವಸೀಮ್‌ ಪಾಕಿಸ್ತಾನದ ಪರ ಏಕದಿನ ಕ್ರಿಕೆಟ್‌ನಲ್ಲಿ 5 ಅರ್ಧ ಶತಕಗಳನ್ನು ಒಳಗೊಂಡಂತೆ 986 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 44 ಒಡಿಐ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೇ ಟಿ20ಐ ಕ್ರಿಕೆಟ್‌ನಲ್ಲಿ 554 ರನ್ ಗಳಿಸುವುದರೊಂದಿಗೆ ಇಮಾಮ್‌ ವಸೀಮ್‌ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ 73 ವಿಕೆಟ್ ಪಡೆದಿದ್ದಾರೆ.