Sunday, 1st December 2024

Mohammed Shami: ವರ್ಷದ ಬಳಿಕ ಕ್ರಿಕೆಟ್‌ ಮೈದಾನಕ್ಕಿಳಿದ ಶಮಿ; ಆಸೀಸ್‌ಗೆ ನಡುಕ

ಇಂದೋರ್‌: ಟೀಮ್‌ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್‌ ಶಮಿ(Mohammed Shami) ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಬುಧವಾರ ಆರಂಭಗೊಂಡ ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ (Ranji Trophy) ಪಂದ್ಯದಲ್ಲಿ ಬಂಗಾಳ ಪರ ಕಣಕ್ಕಿಳಿಯುವ ಮೂಲಕ ಶಮಿ ಕ್ರಿಕೆಟ್‌ ಕಮ್‌ಬ್ಯಾಕ್‌ ಮಾಡಿದರು. ಶಮಿ ಕ್ರಿಕೆಟ್‌ಗೆ ಮರಳಿರುವ ಬೆನ್ನಲ್ಲೇ ಅವರನ್ನು ಆಸೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಬಹುದೇ ಎಂಬ ಚರ್ಚೆಯೊಂದು ಶುರುವಾಗಿದೆ.

ಮೂಲಗಳ ಪ್ರಕಾರ ಮೊಹಮದ್ ಶಮಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ತಾವು ಸಂಪೂರ್ಣ ಫಿಟ್ ಇರುವುದಾಗಿ ಸಾಬೀತುಪಡಿಸಿದರೆ, ಅವರನ್ನು ಭಾರತ ತಂಡ ಆಸ್ಟ್ರೇಲಿಯಾಗೆ ಕರೆಸಿಕೊಳ್ಳಲು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ. ಆಸೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ನ.22 ರಿಂದ ಆರಂಭಗೊಳ್ಳಲಿದೆ. ಪರ್ತ್‌ನಲ್ಲಿ ಈ ಪಂದ್ಯ ನಡೆಯಲಿದೆ. ಶಮಿಯನ್ನು ರಣಜಿಯ 2 ಪಂದ್ಯಗಳನ್ನಾಡಿಸಿ ಇಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರಿದರೆ ಮೂರನೇ ಟೆಸ್ಟ್‌ ವೇಳೆಗೆ ಭಾರತ ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ IND vs AUS: ಪರ್ತ್‌ ಟೆಸ್ಟ್‌ಗೆ ಬೌನ್ಸಿ ಪಿಚ್‌; ಎಚ್ಚರಿಕೆ ನೀಡಿದ ಕ್ಯುರೇಟರ್‌

ಸದ್ಯ ಆಸೀಸ್‌ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಅನುಭವಿ ಬೌಲರ್‌ಗಳಾಗಿ ಇರುವುದು ಕೇವಲ 2 ಮಾತ್ರ. ಅವರೆಂದರೆ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್. ಇವರನ್ನು ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲ. ಶಮಿ ತಂಡ ಕೂಡಿ ಕೊಂಡರೆ ಬಲ ಹೆಚ್ಚಲಿದೆ. ಹೀಗಾಗಿ ಶಮಿಯ ಪ್ರದರ್ಶನದ ಮೇಲೆ ಆಸ್ಟ್ರೇಲಿಯಾ ಕೂಡ ಕಣ್ಣಿಡಲಿದೆ. ಈ ಹಿಂದಿನ ಎರಡು ಆಸೀಸ್‌ ಪ್ರವಾಸಲ್ಲಿ ಶಮಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಇದುವರೆಗೂ ಶಮಿ ಆಸ್ಟ್ರೇಲಿಯಾ ಎದುರು 12 ಟೆಸ್ಟ್ ಪಂದ್ಯಗಳನ್ನಾಡಿದ್ದು, 44 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇನ್ನು ಆಸೀಸ್‌ ನೆಲದಲ್ಲಿ 8 ಟೆಸ್ಟ್‌ ಪಂದ್ಯಗಳನ್ನಾಡಿದ್ದು 31 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ವಿಶ್ವ ಕಪ್‌ ಫೈನಲ್‌ ಪಂದ್ಯದ ಬಳಿಕ ಶಮಿ ಹಿಮ್ಮಡಿ ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್‌ ಆಡುವ ಅವಕಾಶ ಕೂಡ ಕಳೆದುಕೊಂಡಿದ್ದರು.