Wednesday, 11th December 2024

ಆಗಸ್ಟ್‌ 7ರಂದು ರಾಷ್ಟ್ರೀಯ ಜಾವೆಲಿನ್‌ ದಿನ ಆಚರಣೆ: ಎಎಫ್‌ಐ ತೀರ್ಮಾನ

ನವದೆಹಲಿ: ಆಗಸ್ಟ್‌ 7ರಂದು ನೀರಜ್‌ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ದಿನವನ್ನು ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ತೀರ್ಮಾನಿಸಿದೆ.

ನೀರಜ್‌, ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಟೋಕಿಯೊ ಕೂಟದಲ್ಲಿ ಅವರು 87.58 ಮೀಟರ್ಸ್‌ ಸಾಮರ್ಥ್ಯ ತೋರಿ ಈ ಸಾಧನೆ ಮಾಡಿದ್ದರು.

‘ಜಾವೆಲಿನ್‌ ಥ್ರೊ ಸ್ಪರ್ಧೆಯತ್ತ ಯುವ ಸಮುದಾಯವನ್ನು ಆಕರ್ಷಿಸುವ ಸಲುವಾಗಿ ಆಗಸ್ಟ್‌ 7ನ್ನು ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲು ನಿರ್ಧರಿಸ ಲಾಗಿದೆ. ಆ ದಿನದಂದು ನಮ್ಮ ಅಧೀನಕ್ಕೊಳಪಡುವ ಎಲ್ಲಾ ಫೆಡರೇಷನ್‌ಗಳು ಜಾವೆಲಿನ್‌ ಸ್ಪರ್ಧೆ ಏರ್ಪ‍ಡಿಸಲಿವೆ’ ಎಂದು ಎಎಫ್‌ಐನ ಯೋಜನಾ ಆಯೋಗದ ಮುಖ್ಯಸ್ಥ ಲಲಿತ್‌ ಭಾನೋಟ್‌ ಮಂಗಳವಾರ ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲೂ ಜಾವೆಲಿನ್‌ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತದೆ. ಎಲ್ಲಾ ಫೆಡರೇಷನ್‌ಗಳಿಗೂ ಜಾವೆಲಿನ್‌ ಅನ್ನು ಪೂರೈಸ ಲಿದ್ದೇವೆ. ಜಾವೆಲಿನ್‌ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಎಎಫ್‌ಐ 2018ರಲ್ಲಿ ರಾಷ್ಟ್ರೀಯ ಜಾವೆಲಿನ್‌ ಥ್ರೋ ಚಾಂಪಿಯನ್‌ಷಿಪ್‌ ಶುರುಮಾಡಿತ್ತು. ಇದರ ಮೂರನೇ ಆವೃತ್ತಿಯು ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿದೆ.

ನನ್ನಿಂದ ಪ್ರೇರಿತಗೊಂಡು ಯುವಕರು ಜಾವೆಲಿನ್‌ ಥ್ರೋ ಸ್ಪರ್ಧೆಯತ್ತ ಮುಖಮಾಡಿದರೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ’ ಎಂದು ನೀರಜ್‌ ಚೋಪ್ರಾ ತಿಳಿಸಿದ್ದಾರೆ. ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ನೀರಜ್‌ ತಿಳಿಸಿದರು.