ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final) 2031 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಭಾನುವಾರ ಅಧಿಕೃತ ಪ್ರಕಟಣೆಯ ಮೂಲಕ ದೃಢಪಡಿಸಿದೆ. ಆರಂಭದಿಂದಲೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಆಯೋಜಿಸುತ್ತಿರುವ ಫೈನಲ್ ಪಂದ್ಯ ಮುಂದಿನ ಮೂರು ಆವೃತ್ತಿಯವರೆಗೆ ಮುಂದುವರಿಯಲಿದೆ. ಹೀಗಾಗಿ 2031ರ ಬಳಿಕವಷ್ಟೇ ಫೈನಲ್ ಆಯೋಜನೆಗೆ ಎದುರು ನೋಡಬೇಕಿದೆ.
ಕಳೆದ ಮೂರು ಆವೃತ್ತಿಗಳ ಚಾಂಪಿಯನ್‌ಶಿಪ್‌ನಲ್ಲಿ ಇಸಿಬಿಯ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ. ಮೂರು ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್ ಇಂಗ್ಲೆಂಡ್‌ನ ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಅವುಗಳೆಂದರೆ ಸೌತಾಂಪ್ಟನ್ (2021), ದಿ ಓವಲ್ (2023), ಮತ್ತು 2025 ರಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನ.
"ಇತ್ತೀಚಿನ ಫೈನಲ್‌ಗಳನ್ನು ಆಯೋಜಿಸುವಲ್ಲಿ ಯಶಸ್ವಿ ದಾಖಲೆಯನ್ನು ಅನುಸರಿಸಿ, 2027, 2029 ಮತ್ತು 2031 ಆವೃತ್ತಿಗಳ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ನೀಡುವುದನ್ನು ಮಂಡಳಿ ದೃಢಪಡಿಸಿದೆ" ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಜಿಂಬಾಬ್ವೆಯಲ್ಲಿ ನಡೆದ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ 2027ರ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆತಿಥ್ಯದ ಕುರಿತು ಬಿಸಿಸಿಐ ಚರ್ಚಿಸಿತ್ತು. ಈ ಸಭೆಗೆ ಐಪಿಎಲ್ ಆಧ್ಯಕ್ಷ ಅರುಣ್ ಧುಮಾಲ್ ಅವರು ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಹೀಗಾಗಿ ಭಾರತ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ಐಸಿಸಿ ಎಲ್ಲ ಊಹಾಪೋಹಕ್ಕೆ ತೆರೆ ಎಳೆದಿದ್ದು 2031 ರವರೆಗೆ ಇಂಗ್ಲೆಂಡ್‌ನಲ್ಲಿಯೇ ಫೈನಲ್ ನಡೆಯಲಿದೆ ಎಂದಿದೆ.
ಸಿಂಗಾಪುರದಲ್ಲಿ ನಡೆದ 4 ದಿನಗಳ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯ ಸಭೆಯ ಅಂತಿಮ ದಿನವಾದ ಭಾನುವಾರ ಎರಡು ಹೊಸ ಕ್ರಿಕೆಟ್ ಮಂಡಳಿಗಳಿಗೆ ಐಸಿಸಿ ಅಸೋಸಿಯೇಟ್ ಸದಸ್ಯತ್ವ ಸ್ಥಾನಮಾನ ನೀಡಿದೆ. ಟಿಮೋರ್ ಲೆಸ್ಟೆ ಕ್ರಿಕೆಟ್ ಫೆಡರೇಶನ್ ಮತ್ತು ಜಾಂಬಿಯಾ ಕ್ರಿಕೆಟ್ ಯೂನಿಯನ್ ಜಾಗತಿಕ ಕ್ರಿಕೆಟ್ ಸಮುದಾಯವನ್ನು ಸೇರಿಕೊಂಡಿದ್ದು, ಐಸಿಸಿ ಸದಸ್ಯತ್ವದ ಒಟ್ಟು ಸಂಖ್ಯೆ 110 ಕ್ಕೆ ತಲುಪಿದೆ.