Friday, 27th September 2024

Olympiad: ಒಲಿಂಪಿಯಾಡ್‌ ವಿಜೇತ ತಂಡಗಳಿಗೆ 3.2 ಕೋಟಿ ಬಹುಮಾನ ಘೋಷಣೆ

Olympiad

ನವದೆಹಲಿ: ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ(Olympiad) ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಪುರುಷರ ಹಾಗೂ ಮಹಿಳಾ ತಂಡಕ್ಕೆ(Olympiad-winning teams) ಅಖಿಲ ಭಾರತ ಚೆಸ್‌ ಫೆಡರೇಷನ್‌ (AICF) ಭಾರೀ ಮೊತ್ತದ ನಗದು ಬಹುಮಾನ ಘೋಷಿಸಿದೆ. 3.2 ಕೋಟಿ ನಗದು ಬಹುಮಾನ ನೀಡುವುದಾಗಿ ತಿಳಿಸಿದೆ. ಬುಧವಾರ ಚೆಸ್‌ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಧಾನಿ ನಿವಾಸದಲ್ಲಿ ಸಮ್ಮಾನಿಸಿದ್ದರು.

ಎಐಸಿಎಫ್‌ ಅಧ್ಯಕ್ಷ ನಿತಿನ್ ನಾರಂಗ್ ಅವರು ಬಹುಮಾನ ಘೋಷಿಸಿದ್ದು, ತಂಡದ ಪ್ರತಿಯೊಬ್ಬ ಆಟಗಾರ ಮತ್ತು ಆಟಗಾರ್ತಿಯರು ತಲಾ 25 ಲಕ್ಷ ರೂ. ಪಡೆಯಲಿದ್ದಾರೆ. ಪುರುಷರ ಮತ್ತು ಮಹಿಳಾ ತಂಡಗಳ ಕೋಚ್‌ ಆಗಿದ್ದ ಶ್ರೀನಾಥ್ ನಾರಾಯಣನ್ ಮತ್ತು ಅಭಿಜಿತ್‌ ಕುಂಟೆ ಅವರಿಗೆ ತಲಾ 15 ಲಕ್ಷ ರೂ. ನೀಡಲಾಗುವುದು. ಭಾರತ ನಿಯೋಗದ ನೇತೃತ್ವ ವಹಿಸಿದ್ದ ಗ್ರ್ಯಾಂಡ್‌ಮಾಸ್ಟರ್‌ ದಿವ್ಯೇಂದು ಬರುವಾ 10ಲಕ್ಷ ರೂ. ಪಡೆಯಲಿದ್ದು, ಸಹಾಯಕ ತರಬೇತುದಾರರು ತಲಾ 7.5 ಲಕ್ಷ ಮೊತ್ತ ಪಡೆಯಲಿದ್ದಾರೆ.

ಸೆಪ್ಟೆಂಬರ್ 22ರ ಭಾನುವಾರ ಹಂಗೇರಿಯಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಅರ್ಜುನ್‌ ಎರಿಗೇಸಿ, ಡಿ. ಗುಕೇಶ್‌, ಆರ್‌. ಪ್ರಜ್ಞಾನಂದ, ಪಿ. ಹರಿಕೃಷ್ಣ ಮತ್ತು ಶ್ರೀನಾಥ್‌ ನಾರಾಯಣನ್‌ (ನಾಯಕ) ಅವರಿದ್ದ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಚೊಚ್ಚಲ ಸ್ವರ್ಣ ಜಯಿಸಿತ್ತು. ಬಳಿಕ ದ್ರೋಣವಲ್ಲಿ ಹರಿಕಾ, ದಿವ್ಯಾ ದೇಶ್‌ಮುಖ್‌, ಆರ್‌. ವೈಶಾಲಿ ಮತ್ತು ವಂತಿಕಾ ಅಗರ್ವಾಲ್‌ ಅವರಿದ್ದ ಮಹಿಳಾ ತಂಡವೂ ಚಿನ್ನಕ್ಕೆ ಕೊರಳೊಡ್ಡಿತ್ತು. ಪುರುಷರ ತಂಡ ಸ್ಲೊವೇ ನಿಯಾ ವಿರುದ್ಧ ಗೆಲುವು ದಾಖಲಿಸಿತು. ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ 3.5-0.5ರಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ IND vs BAN 2nd Test: ಪಿಚ್‌ ರಿಪೋರ್ಟ್‌, ಆಡುವ ಬಳಗ, ಹವಾಮಾನ ವರದಿ ಹೇಗಿದೆ?

ವಿದಿತ್‌ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಕಾರಣದಿಂದಲೇ ಭಾಕು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಭಾಕು ತಲುಪಿದ್ದ ವಿದಿತ್‌ ಚೆಸ್‌ ಒಲಿಂಪಿಯಾಡ್‌ ಚಾಂಪಿಯನ್‌ ಆಟಗಾರರನ್ನು ಮೋದಿ ಸಮ್ಮಾನಿಸುವ ಸುದ್ದಿ ತಿಳಿದ ತಕ್ಷಣ ಅವರು ತವರಿಗೆ ವಾಪಸಾದರು. ಈ ವಿಚಾರವನ್ನು ವಿದಿತ್‌ ತಮ್ಮ ಟ್ವಿಟರ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.