Saturday, 12th October 2024

ಪಿ.ವಿ.ಸಿಂಧು ಮಿಂಚಿನ ಆಟ: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಟೋಕಿಯೊ: ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು(2016 ರಿಯೋ ಒಲಿಂಪಿಕ್ಸ್)  ಮಿಂಚಿನ ಆಟ ಮುಂದು ವರಿಸಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಪಂದ್ಯದಲ್ಲಿ ಸಿಂಧು, ಹಾಂಕಾಂಗ್‌ನ ಎನ್‌ವೈ ಚೆಯುಂಗ್ ವಿರುದ್ಧ 21-9 21-16ರಿಂದ ಗೆಲುವಿನ ನಗೆ ಬೀರಿದರು. ವಿಶ್ವ ನಂ. 34ನೇ ರ‍್ಯಾಂಕ್‌ನ ಚೆಯುಂಗ್ ವಿರುದ್ಧದ ಪಂದ್ಯವನ್ನು 35 ನಿಮಿಷದಲ್ಲೇ ವಶಪಡಿಸಿಕೊಂಡರು.

ಭಾರತದ ಭರವಸೆಯ ತಾರೆ ಸಿಂಧು ತಮ್ಮ ಅಮೋಘ ಆಟದ ಮೂಲಕ ಎದುರಾಳಿಯ ಮೇಲೆ ಪಾರಮ್ಯ ಮೆರೆದರು. ಸಿಂಧು, ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಶ್ವ ನಂ.12ನೇ ರ‍್ಯಾಂಕ್‌ನ ಮಿಯಾ ಬ್ಲೆಚ್‌ಫೆಲ್ಡ್ ಸವಾಲನ್ನು ಎದುರಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ ಜಯಭೇರಿ ಮೊಳಗಿಸಿದ್ದರು.